Index   ವಚನ - 405    Search  
 
ಪಂಚಮುಖ ದಶಭುಜವನುಳ್ಳ ಸದಾಶಿವನ ನಿರ್ಭಾವಮುಖದಲ್ಲಿ ಆತ್ಮನುತ್ಪತ್ಯವಾಯಿತ್ತು. ಆ ಸದಾಶಿವನ ಈಶಾನಮುಖದಲ್ಲಿ ಆಕಾಶ ಉತ್ಪತ್ಯವಾಯಿತ್ತು. ಆ ಸದಾಶಿವನ ತತ್ಪುರುಷಮುಖದಲ್ಲಿ ವಾಯು ಉತ್ಪತ್ಯವಾಯಿತ್ತು. ಆ ಸದಾಶಿವನ ಅಘೋರಮುಖದಲ್ಲಿ ಅಗ್ನಿ ಉತ್ಪತ್ಯವಾಯಿತ್ತು. ಆ ಸದಾಶಿವನ ವಾಮದೇವಮುಖದಲ್ಲಿ ಅಪ್ಪು ಉತ್ಪತ್ಯವಾಯಿತ್ತು. ಆ ಸದಾಶಿವನ ಸದ್ಯೋಜಾತಮುಖದಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು. ಆ ಸದಾಶಿವನ ಮನಸ್ಸಿನಲ್ಲಿ ಚಂದ್ರನುತ್ಪತ್ಯವಾಯಿತ್ತು. ಆ ಸದಾಶಿವನ ಚಕ್ಷುವಿನಲ್ಲಿ ಸೂರ್ಯನುತ್ಪತ್ಯವಾದನು ನೋಡಾ. ಇದಕ್ಕೆ ಈಶ್ವರೋವಾಚ: ಸದ್ಯೋಜಾತಸ್ತಥಾಭೂಮಿ ವಾಮದೇವೋ ಭವೇ ಜ್ಜಲಂ | ಅಘೋರಾದ್ವಹ್ನಿರಿತ್ಯುಕ್ತಂ ತತ್ಪುರುಷಾದ್ವಾಯುರುಚ್ಯತೇ || ಈಶಾನಂ ಗಗನಾಕಾರಂ ಪಂಚಬ್ರಹ್ಮಮಯಂ ಜಗತ್ | ಚಂದ್ರಮಾ ಮನಸೋಃ ಜಾತ ಚಕ್ಷುಃ ಸೂರ್ಯೋ ಅಜಾಯತ | ಆತ್ಮಾ ಗುಹ್ಯಮುಖಾಜ್ಜಾತಃ ಇತಿ ಭೇದಂ ವರಾನನೇ ||'' ಇಂತೆಂದುದಾಗಿ, ಇದಕ್ಕೆ ಶ್ರೀಮಹಾದೇವ ಉವಾಚ: ಭೂಜಲಾಗ್ನಿ ಮರುದ್ವ್ಯೋಮ ಭಾಸ್ಕರೋ ಶಶಿಶೇಖರಃ | ದಿವಿಪ್ರಕಾಶತೇ ಸೂರ್ಯಃ ರಾತ್ರೌ ಚಂದ್ರಃಪ್ರಕಾಶತೇ | ಸರ್ವಚೈತನ್ಯಮಾತ್ಮಾನಂ ಶಿವಾಂ ಶೋಷ್ಟ ಮೂರ್ತಯಃ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.