Index   ವಚನ - 454    Search  
 
ಇನ್ನು ಆ ಪ್ರಣಮದ ಜ್ಯೋತಿಸ್ವರೂಪದಲ್ಲಿಹ ಚಿದಾತ್ಮ-ಪರಮಾತ್ಮನಲ್ಲಿ ಜೀವಹಂಸ ಪರಮಹಂಸನುತ್ಪತ್ಯವಾಗಿ ಆಜ್ಞಾಚಕ್ರದ ದ್ವಿದಳಪದ್ಮದಲ್ಲಿ ನ್ಯಾಸವಾಗಿಹುದು. ವಿಶುದ್ಧಿಚಕ್ರದ ಯಕಾರ ಬೀಜಾಕ್ಷರದಲ್ಲಿ ಅ ಆ ಇ ಈ ಉ ಊ ಋ ಋೂ ಲೃ ಲೄ ಏ ಐ ಓ ಔ ಅಂ ಅಃ ಎಂಬ ಷೋಡಶಾಕ್ಷರಂಗಳುತ್ಪತ್ಯವಾಗಿ ನ್ಯಾಸವಾಗಿಹುದು. ಅನಾಹತಚಕ್ರದ ವಕಾರ ಬೀಜದಲ್ಲಿ ಕ ಖ ಗ ಘ ಙ ಚ ಛ ಜ ಝ ಞ ಟ ಠ ಎಂಬ ದ್ವಾದಶಾಕ್ಷರಂಗಳುತ್ಪತ್ಯವಾಗಿ ಅನಾಹತಚಕ್ರದ ದ್ವಾದಶದಶದಳಪದ್ಮದಲ್ಲಿ ನ್ಯಾಸವಾಗಿಹುದು. ಮಣಿಪೂರಕಚಕ್ರದ ಶಿಕಾರ ಬೀಜದಲ್ಲಿ ಡ ಢ ಣ ತ ಥ ದ ಧ ನ ಪ ಫ ಎಂಬ ದಶಾಕ್ಷರಂಗಳುತ್ಪತ್ಯವಾಗಿ, ಆ ಮಣಿಪೂರಕಚಕ್ರದ ದಶದಳಪದ್ಮದಲ್ಲಿ ನ್ಯಾಸವಾಗಿಹುದು. ಸ್ವಾಧಿಷ್ಠಾನಚಕ್ರದ ಮಕಾರ ಬೀಜದಲ್ಲಿ ಬ ಭ ಮ ಯ ರ ಲ ಎಂಬ ಷಡಕ್ಷರಂಗಳುತ್ಪತ್ಯವಾಗಿ ಆ ಸ್ವಾಧಿಷ್ಠಾನಚಕ್ರದ ಷಡ್ದಳಪದ್ಮದಲ್ಲಿ ನ್ಯಾಸವಾಗಿಹುದು. ಆಧಾರಚಕ್ರದ ನಕಾರ ಬೀಜದಲ್ಲಿ ವ ಶ ಷ ಸ ಎಂಬ ಚತುರಾಕ್ಷರಂಗಳುತ್ಪತ್ಯವಾಗಿ ಆ ಆಧಾರಚಕ್ರದ ಚತುರ್ದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ. ಇದಕ್ಕೆ ಕಾಲಾಗ್ನಿರುದ್ರಸಂಹಿತಾಯಾಂ: ಹಂ ಕ್ಷಂ ದ್ವಿವರ್ಣಕಂ ಚೈವ ಪರಮಾತ್ಮನಿ ಜಾಯತೇ | ಹಂ ಕ್ಷಂ ದ್ವಿವರ್ಣಕಂ ಚೈವ ಜೀವಾತ್ಮನಿ ಚ ಜಾಯತೇ || ಅಆ ಇಈ ಉಊ ವರ್ಣಂ ಚ ಋಋೂ ಲೃ ಲೄ ವರ್ಣಂ ವಿದುಃ | ಏ ಐ ಓ ಔ ಅಂ ಅಃ ವರ್ಣಂ ಯಕಾರಂ ಚಾಪಿ ಜಾಯತೇ || ಕಖಗಘಙ ವರ್ಣಂ ಚ ಚಛಜಝಞ ವರ್ಣಕಂ | ಟಠ ದ್ವಿವರ್ಣಕಂ ಚೈವ ವಕಾರೇ ಜಾಯತೇ ಧೃವಂ || ಡಢಣ ತಥ ವರ್ಣಂ ಚ ದಧನ ಪಫ ವರ್ಣಕಂ | ಇತ್ಯೇತಿ ದಶವರ್ಣಾನಿ ಶಿಕಾರೇ ಚ ಸಮುದ್ಭವಾಃ || ಬ ಭ ಮ ಯ ರ ವರ್ಣಂ ಚ ಲ ಏಕೋ ವರ್ಣಕಂ ತಥಾ | ಇತಿ ಷಡ್ವರ್ಣಕಂ ಚೈವ ಮಕಾರೇ ಚ ಸಜಾಯತೇ | ವಶಷಸ ಚತುವರ್ಣಂ ನಕಾರಂ ಚ ಸಜಾಯತೇ | ಇತಿ ವರ್ಣಾಕ್ಷರಂ ನ್ಯಾಸಂ ಸುಸೂಕ್ಷ್ಮಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.