Index   ವಚನ - 453    Search  
 
ಇನ್ನು ಬೀಜಾಕ್ಷರಂಗಳ ನೆಲೆ ಅದೆಂತೆಂದಡೆ: ಆ ಗೋಳಕಾಕಾರ ಪ್ರಣವದಲ್ಲಿ ಪ್ರಣವ ಉತ್ಪತ್ಯವಾಗಿ ಆಜ್ಞಾಚಕ್ರಕ್ಕೆ ಬೀಜಾಕ್ಷರವಾಗಿಹುದು. ಆ ಪ್ರಣವದ ದರ್ಪಣಾಕಾರದಲ್ಲಿಹ ಯಕಾರದಲ್ಲಿ ಯಕಾರ ಉತ್ಪತ್ಯವಾಗಿ ವಿಶುದ್ಧಿಚಕ್ರಕ್ಕೆ ಬೀಜಾಕ್ಷರವಾಗಿಹುದು. ಆ ಪ್ರಣವದ ಅರ್ಧಚಂದ್ರಕದಲ್ಲಿಹ ವಕಾರದಲ್ಲಿ ವಕಾರ ಉತ್ಪತ್ಯವಾಗಿ ಅನಾಹತಚಕ್ರಕ್ಕೆ ಬೀಜಾಕ್ಷರವಾಗಿಹುದು. ಆ ಪ್ರಣವದ ಕುಂಡಲಾಕಾರದಲ್ಲಿಹ ಶಿಕಾರದಲ್ಲಿ ಶಿಕಾರ ಉತ್ಪತ್ಯವಾಗಿ ಮಣಿಪೂರಕಚಕ್ರಕ್ಕೆ ಬೀಜಾಕ್ಷರವಾಗಿಹುದು. ಆ ಪ್ರಣವದ ದಂಡಕಸ್ವರೂಪದಲ್ಲಿಹ ಮಕಾರದಲ್ಲಿ ಮಕಾರ ಉತ್ಪತ್ಯವಾಗಿ ಸ್ವಾಧಿಷ್ಠಾನಚಕ್ರಕ್ಕೆ ಬೀಜಾಕ್ಷರವಾಗಿಹುದು. ಆ ಪ್ರಣವದ ತಾರಕಸ್ವರೂಪದಲ್ಲಿಹ ನಕಾರದಲ್ಲಿ ನಕಾರ ಉತ್ಪತ್ಯವಾಗಿ ಆಧಾರಚಕ್ರಕ್ಕೆ ಬೀಜಾಕ್ಷರವಾಗಿಹುದು ನೋಡಾ. ಇದಕ್ಕೆ ಈಶ್ವರ ಉವಾಚ: ಆಧಾರೇ ಚ ನಕಾರಂ ಚ ಸ್ವಾಧಿಷ್ಠಾನೇ ಮಕಾರಕೇ | ಶಿಕಾರಂ ಮಣಿಪೂರಂ ಚ ವಕಾರಂ ಚ ಅನಾಹತೇ | ಯಕಾರಂ ಚ ವಿಶುದ್ಧಿಶ್ಚ ಆಜ್ಞಾ ಪ್ರಣವ ಏವ ಚ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.