Index   ವಚನ - 571    Search  
 
ಶ್ರೋತ್ರ ತ್ವಕ್ಕು ಚಕ್ಷು ಜಿಹ್ವೆ ಘ್ರಾಣಂಗಳೆಂಬವೈದು ಜ್ಞಾನೇಂದ್ರಿಯಂಗಳು. ವಾಕು ಪಾಣಿ ಪಾದ ಗುಹ್ಯ ಗುದಂಗಳೆಂಬವೈದು ಕರ್ಮೇಂದ್ರಿಯಂಗಳು. ಶಬ್ದ ಸ್ಪರ್ಶ ರೂಪ ರಸ ಗಂಧಂಗಳೆಂಬವೈದು ವಿಷಯಂಗಳು. ವಚನ ಆದಾನ ಗಮನ ಆನಂದ ವಿಸರ್ಜನಂಗಳು ಕರ್ಮೇಂದ್ರಿಯಂಗಳ ವಿಷಯಂಗಳು. ಶ್ರೋತ್ರೇಂದ್ರಿಯ ವಾಗೀಂದ್ರಿಯಂಗಳಿಗೆ ಭೇದವಿಲ್ಲ. ಶ್ರವಣೇಂದ್ರಿಯವಿಷಯವಪ್ಪ ಶಬ್ದಕ್ಕೆಯು, ವಾಗೀಂದ್ರಿಯವಿಷಯವಪ್ಪ ನುಡಿಗೆಯು ಭೇದವಿಲ್ಲ. ತ್ವಗೀಂದ್ರಿಯ ಪಾಣೇಂದ್ರಿಯಂಗಳೆಂಬ, ಜ್ಞಾನೇಂದ್ರಿಯ ಕರ್ಮೇಂದ್ರಿಯಂಗಳೆರಡಕ್ಕೆಯು ತ್ವಕ್ಪಾಣಿಗಳ ವಿಷಯಂಗಳಪ್ಪ ಸ್ಪರ್ಶನ ಆದಾನ ಈ ಎರಡು ವಿಷಯಂಗಳಿಗೆಯೂ ಭೇದವಿಲ್ಲ. ಜ್ಞಾನಕರ್ಮೇಂದ್ರಿಯಂಗಳಪ್ಪ ನೇತ್ರ ಪಾದಂಗಳೆಂಬೆರಡಕ್ಕೆಯು ನೇತ್ರ ವಿಷಯವಪ್ಪ ರೂಪಕ್ಕೆಯು ಪಾದೇಂದ್ರಿಯ ವಿಷಯಮಪ್ಪ ಗಮನಕ್ಕೆಯು ಭೇದವಿಲ್ಲ. ಆ ಜಿಹ್ವೆ ಗುಹ್ಯ ವಿಷಯಂಗಳಪ್ಪ ರಸ ಆನಂದವಪ್ಪವೆಂಬೆರಡು ವಿಷಯಂಗಳಿಗೆಯೂ ಭೇದವಿಲ್ಲ. ಘ್ರಾಣೇಂದ್ರಿಯ ಗುದೇಂದ್ರಿಯಂಗಳಿಗೆಯು ಭೇದವಿಲ್ಲ. ಅವರ ವಿಷಯಂಗಳಪ್ಪ ಗಂಧ ವಿಜರ್ಸನಂಗಳೆಂಬೆರಡು ವಿಷಯಂಗಳಿಗೆಯು ಭೇದವಿಲ್ಲ. ಈ ಜ್ಞಾನೇಂದ್ರಿಯ ಕರ್ಮೇಂದ್ರಿಯಂಗಳಿಗೆ ಹೃದಯವೇ ಕಾರಣವಾಗಿ ಹೃದಯವಾಕಾಶವೆನಿಸಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ: ಶ್ರೋತ್ರಂ ವಾಚೋರ್ನಭೇದೋsಸ್ತಿ ಶಬ್ದಸ್ಯ ವಚನಸ್ಯ ಚ | ಸ್ಪರ್ಶಭಾಷಣ ಸದ್ಭಾವಾದ್ಭೇದೋ ನ ತು ಕರದ್ವಯೋಃ || ನ ನೇತ್ರಪಾದಯೋರ್ಭೇದಃ ರೂಪಸ್ಯ ಗಮನಸ್ಯ ಚ | ರಸಾನಂದಯೋರ್ಭೇದಃ ರೂಪಸ್ಯ ಗಮನಸ್ಯ ಚ | ರಸಾನಂದಯೋರ್ಭೇದೋ ನಾಸ್ತಿ ಗಂಧವಿಸರ್ಗಯೋಃ | ಅಸ್ತಿಭೇದ ಪ್ರಮಾಣಸ್ಯ ಇತಿ ಸತ್ಯಾರ್ಥವರ್ಧಿನಿ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.