ಬ್ರಹ್ಮಚಕ್ರದ ಸಹಸ್ರದಳಪದ್ಮದೊಳು ದೇವರಿಹುದು,
ಆ ದೇವರ ಕಂಡಿಹೆನೆಂದು ಸ್ವರ್ಗ ಮೋಕ್ಷಂಗಳಿಗೆ ಹೇತುವಾಗಿಹ
ಅನ್ನಪಾನಾದಿಗಳಂ ಬಿಟ್ಟು ತನುವ ದಂಡಿಸಿ,
ಸ್ವಸ್ತಪದ್ಮಾಸನದಲ್ಲಿ ಕುಳ್ಳಿರ್ದು, ಮಹಾವಾಯುವಂ ಪಿಡಿದು,
ಬಹುಮೂಲಜ್ವಾಲೆಯನೆಬ್ಬಿಸಿ, ಸುಷುಮ್ನನಾಳದ ತುದಿಯನಡರಿಸಿ,
ಅಮಳೋಕ್ಯದ್ವಾರದೊಳು ಜಿಹ್ವೆಯೇರಿಸಿ ಅಮೃತವನುಂಡು
ಅಲ್ಲಿಹ ದೇವರ ಕಂಡಿಹೆನೆಂದು ಕಾಣದೆ
ವಾತ ಪಿತ್ಥ ಶ್ಲೇಷ್ಮಂಗಳಂ ಕುಡಿದು
ಸತ್ತ ಕರ್ಮಯೋಗಿಗಳು ಕೋಟಾನುಕೋಟಿ.
ಅಲ್ಲಿಂದ ಮೇಲೆ ಶಿಖಾಚಕ್ರದ ದಶದಳಪದ್ಮದೊಳು ದೇವರಿಹುದು,
ಆ ದೇವರ ಕಂಡೆಹೆನೆಂದು ಇಡಾ ಪಿಂಗಳ ಸುಷುಮ್ನ ನಾಳದಲ್ಲಿ
ಸೂಸುವ ವಾಯುವ ಸೂಸಲೀಯದೆ
ಕುಂಬಾರನ ಚಕ್ರ ಒಂದು ಸುತ್ತು ಬಾಹನ್ನಕ್ಕರ
ಸಾವಿರ ಸುತ್ತು ಬಹ ಮನವ
ನಿಲಿಸಿ ಆ ಮನ ಪವನ ಸಂಯೋಗದಿಂದ
ಏಕಾಗ್ರಚಿತ್ತನಾಗಿ ಶಿಖಾಚಕ್ರದ ತ್ರಿದಳಪದ್ಮದ
ಕರಣಿಕಾಮಧ್ಯದಲ್ಲಿಹ ದೇವರ ಧ್ಯಾನಿಸಿ ಕಂಡೆಹೆನೆಂದು
ಆ ದೇವರ ಕಾಣದೆ ಸತ್ತ
ಧ್ಯಾನಯೋಗಿಗಳು ಕೋಟಾನುಕೋಟಿ.
ಅಲ್ಲಿಂದತ್ತ ಮೇಲೆ ಪಶ್ಚಿಮಚಕ್ರದೊಳು
ಅಪ್ರದರ್ಶನ ವರ್ಣವಾಗಿಹ
ಏಕದಳಪದ್ಮಸಿಂಹಾಸನದ ಮೇಲೆ
ದೇವರ ಲಕ್ಷವಿಟ್ಟು ನೋಡಿ ಕಂಡಿಹೆನೆಂದು
ಕಾಣದೆ ಸತ್ತ ಭ್ರಾಂತಯೋಗಿಗಳು ಕೋಟಾನುಕೋಟಿ.
ಇಂತೀ ಕರ್ಮಯೋಗ, ಲಂಬಿಕಾಯೋಗ,
ಧ್ಯಾನಯೋಗಗಳೆಂಬ
ಯೋಗಂಗಳ ಸಾಧಿಸಿ ದೇವರ ಕಂಡಿಹೆನೆಂದು
ಕಾಣದೆ ಸತ್ತ ಭ್ರಾಂತಿಯೋಗಿಗಳಿಗೆ ಕಡೆಯಿಲ್ಲ.
ತನ್ನ ತಾನರಿದು ತಾನಾರೆಂದು
ತಿಳಿದಡೆ ತಾನೆ ದೇವ ನೋಡಾ,
ಅಪ್ರಮಾಣಕೂಡಲಸಂಗಮದೇವಾ.