ಹೃದಯಕಮಲಮಧ್ಯದಲ್ಲಿ ಲಕ್ಷವಿಟ್ಟು
ನೋಡುವ ದೇವರು ದೇವರಲ್ಲ,
ಭ್ರೂಮಧ್ಯದಲ್ಲಿ ಲಕ್ಷವಿಟ್ಟು ನೋಡುವ ದೇವರು ದೇವರಲ್ಲ.
ಬ್ರಹ್ಮರಂಧ್ರದಲ್ಲಿ ಲಕ್ಷವಿಟ್ಟು ನೋಡುವ ದೇವರು ದೇವರಲ್ಲ.
ನಾಸಿಕಾಗ್ರದಲ್ಲಿ ಲಕ್ಷವಿಟ್ಟು ನೋಡುವ ದೇವರು ದೇವರಲ್ಲ.
ಅಖಂಡಜ್ಯೋತಿರ್ಮಯವಾಗಿಹ
ಗೋಳಕಾಕಾರ ಸ್ವಯಂಭುಲಿಂಗವ
ತಾನೆಂದರಿದಡೆ ತಾನೇ ದೇವ ನೋಡಾ,
ಅಪ್ರಮಾಣಕೂಡಲಸಂಗಮದೇವಾ.