Index   ವಚನ - 606    Search  
 
ಭೂಚರಿಯಮುದ್ರೆಯ ದೇವರೆಂಬರು, ಆ ಭೂಚರಿಯಮುದ್ರೆಯು ದೇವರಲ್ಲ. ಖೇಚರಿಯಮುದ್ರೆಯ ದೇವರೆಂಬರು, ಆ ಖೇಚರಿಯಮುದ್ರೆಯು ದೇವರಲ್ಲ. ಶಾಂಭವಮುದ್ರೆಯ ದೇವರೆಂಬರು, ಆ ಶಾಂಭವಮುದ್ರೆಯು ದೇವರಲ್ಲ ನೋಡಾ. ಸ್ವಸ್ಥಪದ್ಮಾಸನದಲ್ಲಿ ಕುಳ್ಳಿರ್ದು ಶ್ರೋತ್ರ ನೇತ್ರ ಜಿಹ್ವೆ ಘ್ರಾಣವೆಂಬ ಸಪ್ತದ್ವಾರಂಗಳನೊತ್ತಿ ನೋಡಲು ಆ ಒತ್ತಿದ ಪ್ರಭೆಯಿಂದ ಕುಂಬಾರನ ಚಕ್ರದ ಹಾಂಗೆ ಶ್ವೇತ ಪೀತ ಕಪೋತ ಹರಿತ ಮಾಂಜಿಷ್ಠ ವರ್ಣವಾಗಿ ತೋರುವ ಷಣ್ಮುಖೀಮುದ್ರೆಯ ದೇವರೆಂಬರು; ಅಲ್ಲಲ್ಲ ನೋಡಾ. ಇವೆಲ್ಲಕ್ಕೂ ಉತ್ಪತ್ತಿ ಸ್ಥಿತಿ ಲಯ ಉಂಟಾಗಿ ದೇವರಲ್ಲ ನೋಡಾ. ದೇವರಿಗೆ ಉತ್ಪತ್ತಿ ಸ್ಥಿತಿ ಲಯ ಉಂಟೆ ಹೇಳಾ? ಈ ಉತ್ಪತ್ತಿ ಸ್ಥಿತಿ ಲಯವಿಲ್ಲದ ಪರಾಪರತತ್ವ ತಾನೆಂದರಿದಡೆ, ತಾನೇ ದೇವ ನೋಡಾ, ಅಪ್ರಮಾಣಕೂಡಲಸಂಗಮದೇವಾ.