ಶಿವತತ್ತ್ವದ ಅಪ್ಪುವಿನ ಮೇಲೆ ನಿರಾಳ ಸ್ವಾಧಿಷ್ಠಾನಚಕ್ರ,
ಅಲ್ಲಿಯ ಪದ್ಮ ನಾನೂರು ಐವತ್ತು ದಳದ ಪದ್ಮ;
ಆ ಪದ್ಮವು ಉಪಮೆ ಇಲ್ಲದ ವರ್ಣ.
ಅಲ್ಲಿಯ ಅಕ್ಷರ ನಾನೂರ ಐವತ್ತಕ್ಷರ;
ಆ ಅಕ್ಷರ ನಿರಾಕಾರವಾಗಿಹುದು.
ಅಲ್ಲಿಯ ಶಕ್ತಿ ನಿರಾಳ ಈಶ್ವರಶಕ್ತಿ.
ನಿತ್ಯಾನಂದಬ್ರಹ್ಮವೆ ಅಧಿದೇವತೆ.
ಅಲ್ಲಿಯ ನಾದ ಪ್ರಣವನಾದ.
ಅಲ್ಲಿಯ ಬೀಜಾಕ್ಷರ ಉಕಾರ ನೋಡಾ
ಅಪ್ರಮಾಣಕೂಡಲಸಂಗಮದೇವಾ.