Index   ವಚನ - 713    Search  
 
ಈ ಮಂತ್ರಾಧ್ವ ಪದಾಧ್ವವ ತನ್ನಲ್ಲಿ ತಿಳಿದು ಅನುಭವಿಸಬಲ್ಲಾತನ ಆಚಾರ್ಯನೆಂಬೆ; ವರ್ಣಾಧ್ವ ಭುವನಾಧ್ವವ ತನ್ನಲ್ಲಿ ತಿಳಿದು ಅನುಭವಿಸಬಲ್ಲಾತನ ಆಚಾರ್ಯನೆಂಬೆ; ತತ್ತ್ವಾಧ್ವ ಕಲಾಧ್ವವ ತನ್ನಲ್ಲಿ ತಿಳಿದು ಅನುಭವಿಸಬಲ್ಲಾತನ ಆಚಾರ್ಯನೆಂಬೆ; ಈ ಷಡಧ್ವವ ತನ್ನಲ್ಲಿ ತಿಳಿದು ಅನುಭವಿಸಬಲ್ಲಾತನ ಜಗದಾರಾಧ್ಯನೆಂಬೆ. ಈ ಷಡಧ್ವವ ತನ್ನಲ್ಲಿ ತಿಳಿದು ಅನುಭವಿಸಲರಿಯದೆ ಆಚಾರ್ಯರೆಂಬ ಅನಾಚಾರ್ಯರ ಮೆಚ್ಚುವನೆ ನಮ್ಮ ಅಪ್ರಮಾಣಕೂಡಲಸಂಗಮದೇವ?