Index   ವಚನ - 737    Search  
 
ಅನಂತಕೋಟಿ ತತ್ವಂಗಳನೊಳಕೊಂಡು ಅನಂತಕೋಟಿ ಅಜಪೆ ಗಾಯತ್ರಿಯನೊಳಕೊಂಡು ಅನಂತಕೋಟಿ ಅಕ್ಷರಂಗಳನೊಳಕೊಂಡು ಅನಂತಕೋಟಿ ಶಕ್ತಿಗಳನೊಳಕೊಂಡು ಅನಂತಕೋಟಿ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರನೊಳಕೊಂಡು ಅನಂತಕೋಟಿ ಚಂದ್ರಾದಿತ್ಯರನೊಳಕೊಂಡು ಅನಂತಕೋಟಿ ಭುವನಂಗಳನೊಳಕೊಂಡು ಅನಂತಕೋಟಿ ಭುವನಾಧಿಪತಿಗಳನೊಳಕೊಂಡು ಅನಂತಕೋಟಿ ಬ್ರಹ್ಮಾಂಡಂಗಳನೊಳಕೊಂಡು ತಿರುಗಿ ತಿರುಗಿ ಬಹ ಅನಂತಕೋಟಿ ಕಲ್ಪಾಂತರಂಗಳನೊಳಕೊಂಡು ಮೂರ್ತಿಬ್ರಹ್ಮ ಪಿಂಡಬ್ರಹ್ಮ ಕಲಾಬ್ರಹ್ಮ ಬ್ರಹ್ಮಾನಂದಬ್ರಹ್ಮ ವಿಜ್ಞಾನಬ್ರಹ್ಮ ಪರಬ್ರಹ್ಮವೆಂಬ ಷಡುಸ್ಥಲಬ್ರಹ್ಮವನೊಳಕೊಂಡು ಆದಿ ಮಧ್ಯಾವಸಾನಂಗಳಿಲ್ಲದೆ ಅಖಂಡಮಹದೋಂಕಾರ ಪ್ರಣವವಾಗಿದ್ದುದು ನೋಡಾ. ಇದಕ್ಕೆ ಮಹಾಲಿಂಗಾಗಮೇ: ಆದಿಮಧ್ಯಾಂತ ಶೂನ್ಯಂಚ ಶೂನ್ಯಂ ಶೂನ್ಯಾದಿತೋ ದಶ | ಸರ್ವಶೂನ್ಯಂ ನಿರಾಕಾರಂ ನಿಶ್ಶಬ್ದಂ ಪರಮಂ ಪದಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.