ಆ ಸದ್ಗುರುಸ್ವಾಮಿ ಸದ್ಯೋಜಾತವಾಮದೇವಮುಖದಲ್ಲಿ
ಅಘೋರ ತತ್ಪುರುಷ ಈಶಾನವೆಂಬ ಪಂಚಕಳಸವನಿರಿಸಿ,
ಆ ಶಿಷ್ಯನನು ಗಣತಿಂತಿಣಿಗೆ ದೀರ್ಘದಂಡನಮಸ್ಕಾರವಂ ಮಾಡಿಸಿ
ಪೂರ್ವಜನ್ಮವಂ ಕಳೆದು ಪುನರ್ಜಾತನಂ ಮಾಡಿ,
ಆ ಶಿಷ್ಯನ ಮಸ್ತಕದ ಮೇಲೆ ತಮ್ಮ ಹಸ್ತಕಮಲವನಿರಿಸಿ,
ಬ್ರಹ್ಮರಂಧ್ರದ ಚಿತ್ಪ್ರಭಾಕಳೆಯಂ ತೆಗೆದು
ಆ ಕುಮಾರನ ಠಾವಿನಮೇಲೆ ಆಹ್ವಾನವಂ ಮಾಡಿ
ಇಷ್ಟಲಿಂಗವಂ ಕರಸ್ಥಲದಲ್ಲಿ ಕೊಟ್ಟು,
ಕರ್ಣದ್ವಾರದಲ್ಲಿ ಮಂತ್ರೋಪದೇಶವಂ ಮಾಡಿ, ಗಣಸಾಕ್ಷಿಯಾಗಿ
ದೀಯೆಂಬ ಮಹಾಜ್ಞಾನಮಂ ಕೊಟ್ಟು
ಕ್ಷ ಎಂಬ ಮಲತ್ರಯಂಗಳ ಬಿಡಿಸಿ,
ಸದ್ಗುರುಸ್ವಾಮಿ ಗುರುಲಿಂಗಜಂಗಮವಂ ಮಾಡಿದ ಬಳಿಕ
ತಿರುಗಿ ಆ ಮಲತ್ರಯಂಗಳ ಹಿಡಿದರೆ
ಆ ಗುರುಲಿಂಗ ಜಂಗಮಕ್ಕೆ
ರೌರವನರಕವೆಂದುದು ನೋಡಾ.
ಇದಕ್ಕೆ ವೀರಾಗಮೇ:
ದೀಯತೇ ಜ್ಞಾನಸಂಬಂಧಂ ಕ್ಷೀಯತೇ ಚ ಮಲತ್ರಯಂ |
ದೀಯತೇ ಕ್ಷೀಯತೇ ಚೈವ ದೀಕ್ಷಾಶಬ್ದೋಭಿಧೀಯತೇ ||
ತನ್ಮಲತ್ರಯಸಂಯೋಗಾತ್ ಗುರೂಣಾಂ ಜಂಗಮ ಸ್ತಥಾ |
ದ್ವಿವಿಧ ನರಕಂ ಯಾತಿ ಯಾವಚ್ಚಂದ್ರದಿವಾಕರೌಃ ||''
ಮಲತ್ರಯಂಗಳ ಬಿಟ್ಟು ಸುಳಿವ ಮಹಾಗುರುಲಿಂಗಜಂಗಮಕ್ಕೆ
ನಮೋ ನಮೋ ನಮೋ ಎಂದು ಬದುಕಿದೆನು ನೋಡಾ
ಅಪ್ರಮಾಣಕೂಡಲಸಂಗಮದೇವಾ.