Index   ವಚನ - 807    Search  
 
ತನ್ನನುಭೂತಿಯಲ್ಲಿ ತಾ ಕಂಡ ಶರಣನ ನಿಲವು ಕುರುಹಲ್ಲ-ಗುಣವಲ್ಲ, ರೂಪಲ್ಲ-ನಿರೂಪಲ್ಲ, ಹೊಸದಲ್ಲ-ಹಳದಲ್ಲ, ಒಳಗಲ್ಲ-ಹೊರಗಲ್ಲ, ಹಿಂದಲ್ಲ-ಮುಂದಲ್ಲ, ಕೆಳಗಲ್ಲ-ಮೇಲಲ್ಲ ಎಂದುದು ನೋಡಾ ಶ್ರುತಿಗಳು. ತನ್ನನುಭೂತಿಯಲ್ಲಿ ತಾ ಕಂಡ ಶರಣನ ನಿಲವು ದಶಚಕ್ರಂಗಳಲ್ಲ, ಅವಸ್ಥೆಗಳೈದಲ್ಲ, ಆರಕ್ಷರವಲ್ಲ, ಆರು ವರ್ಣವಲ್ಲ, ಐದು ಮಂಡಲವಲ್ಲವೆಂದುದು ನೋಡಾ ಶ್ರುತಿಗಳು. ತನ್ನನುಭೂತಿಯಲ್ಲಿ ತಾ ಕಂಡ ಶರಣನ ನಿಲವು ಚತುರ್ದಶ ನಾಡಿಗಳಲ್ಲ, ಚತುರ್ದಶ ವಾಯುಗಳಲ್ಲ, ಪಂಚವಿಂಶತಿ ತತ್ತ್ವವಲ್ಲ, ಅಷ್ಟವಿಂಶತಿ ತತ್ತ್ವವಲ್ಲ, ಛತ್ತೀಸ ತತ್ತ್ವವಲ್ಲವೆಂದುದು ನೋಡಾ ಶ್ರುತಿಗಳು. ತನ್ನನುಭೂತಿಯಲ್ಲಿ ತಾ ಕಂಡ ಶರಣನ ನಿಲವು ಐವತ್ತೆರಡಕ್ಕರವಲ್ಲ, ಐದು ಭೂತವಲ್ಲ, ಆರು ಸಾದಾಖ್ಯವಲ್ಲ, ಆರು ಕಲೆಗಳಲ್ಲ, ಆರು ಶಕ್ತಿಗಳಲ್ಲ, ತೂರ್ಯ ತೂರ್ಯಾತೀತವಲ್ಲ, ಪುರುಷನಲ್ಲ, ಪರವಲ್ಲವೆಂದುದು ನೋಡಾ ಶ್ರುತಿಗಳು. ತನ್ನನುಭೂತಿಯಲ್ಲಿ ತಾ ಕಂಡ ಶರಣನ ನಿಲವು ವ್ಯೋಮ ವ್ಯೋಮಾತೀತವಲ್ಲ, ವಾಚಾಮಗೋಚರವಲ್ಲ, ನಿತ್ಯನಿರಂಜನ ನಿರಾಳ, ನಿರಾಮಯವಲ್ಲ ನಿರಾಮಯಾತೀತಕತ್ತತ್ತ ಅತ್ಯತಿಷ್ಠದ್ದಶಾಂಗುಲವೆಂದುದು ನೋಡಾ ಶ್ರುತಿಗಳು ಅಪ್ರಮಾಣಕೂಡಲಸಂಗಮದೇವಾ.