ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ
ನಾಲ್ಕು ದೇಶವ ತಿರುಗಿದಡೇನು ಫಲವಿಲ್ಲ.
ಅಷ್ಟಾಷಷ್ಠಿಕೋಟಿ ತೀರ್ಥಂಗಳಲ್ಲಿ ಸ್ನಾನವ ಮಾಡಿದಡೂ
ಜನನ-ಮರಣ ಪುಣ್ಯ ಪಾಪಂಗಳು ಬಿಡವು.
ಅದೆಂತೆಂದಡೆ:
ಅನೇಕ ಕಾಲವು ಅಷ್ಟಾಷಷ್ಠಿಕೋಟಿ ತೀರ್ಥಂಗಳೊಳಗೆ
ಮತ್ಸ್ಯ ಕೂರ್ಮ ಮಂಡೂಕಂಗಳಿಹವು.
ಆ ಮತ್ಸ್ಯ ಕೂರ್ಮ ಮಂಡೂಕಂಗಳಿಗೆ
ಜನನ-ಮರಣ ಪುಣ್ಯಪಾಪಂಗಳು ಬಿಡದೆಹೋದವು.
ಇದು ಕಾರಣ ಗುರುಪಾದಸೇವೆಯ ಮಾಡಿ,
ಗುರುಕಾರುಣ್ಯವ ಪಡೆದು
ನಿರಾಳ ನಿರಂಜನ ನಿರಾಮಯ ನಿರಾಮಯಾತೀತವೆಂಬ
ಗಂಗೆಯಲ್ಲಿ ಮುಳಗಿದಡೆ
ನಿರಾಳ ನಿರಂಜನ ನಿರಾಮಯ
ನಿರಾಮಯಾತೀತವಾಗಿಹುದು ನೋಡಾ ಜನನವು,
ಅಪ್ರಮಾಣಕೂಡಲಸಂಗಮದೇವಾ.