ರೂಪಾದ ಮೇಲೆ ನಿರೂಪವಿಲ್ಲಾ,
ನಿರೂಪಾದ ಮೇಲೆ ರೂಪವಿಲ್ಲಾ.
ತಾನೇ ರೂಪಾಯಿತ್ತು, ತಾನೇ ನಿರೂಪವಾಯಿತ್ತು.
ಬೇಕಾದರೆ ಬಂತು, ಸಾಕಾದರೆ ಹೋಯ್ತು.
ತಾ ಬಂದು ಹೋಗುವದರೊಳಗೆ ಶಿವಬ್ಯಾರೆ, ಜಗಬ್ಯಾರೆ,
ನರರು ಬ್ಯಾರೆ, ಸುರರು ಬ್ಯಾರೆ, ಇಹಬ್ಯಾರೆ, ಪರಬ್ಯಾರೆ,
ಪುಣ್ಯ ಬ್ಯಾರೆ, ಪಾಪ ಬ್ಯಾರೆ, ಸುಖ ಬ್ಯಾರೆ ದುಃಖ ಬ್ಯಾರೆ,
ಈ ಸರ್ವವು ಬ್ಯಾರೆ ಬ್ಯಾರೆಯಾಗಿ ತೋರುವ
ತನ್ಮ ವಿನೋದ, ತನ್ನಾಟ, ತಾನೆಂದರೇನು? ಮಾಯೆ.
ಮಾಯೆಯೆಂದರೇನು? ನಿರ್ಮಾಯೆ.
ನಿರ್ಮಾಯೆ ಎಂದರೆ ಬಂತ್ಹ್ಯಾಂಗೆ, ಹೋಯಿತ್ಹ್ಯಾಂಗೆ?
ಹುಟ್ಟಿತ್ಹ್ಯಾಂಗೆ? ಬೆಳೀತ್ಹ್ಯಾಂಗೆ ಸತ್ತಿತ್ಹ್ಯಾಂಗೆ ಮಹಾಂತಯೋಗಿ?
ಹೋಗೋದಲ್ಲಾ ನಿರ್ಮಾಯ ನಿರ್ವಯಲಾದ ಮ್ಯಾಲೆ ಬರುವದಲ್ಲ,
ಅಲ್ಲಂದರೇನು ಬಂತು? ಏನು ಬಂತೆಂದರೇನು ಹೋಯಿತು?
ಹೋಗೋದೇನು? ಬರೋದೇನು? ಬರೋದಿಲ್ಲಾ ಹೋಗೋದಿಲ್ಲಾ.
ಏನೂ ಇಲ್ಲಾ, ಎಂತೂ ಇಲ್ಲಾ, ಸುಮ್ಮನೆ ಪರಬ್ರಹ್ಮ,
ಪರಬ್ರಹ್ಮೆಂಬೋ ನಾಮವುಂಟೆ? ಆ ಪರಬ್ರಹ್ಮ ಎಲ್ಲಿಯಿತ್ತು?
ಪರಬ್ರಹ್ಮ ತಾನಾಗುವುದಕ್ಕೆ ಮೊದಲೇ ಏನೆಂಬೋ ನಾಮವುಂಟು?
ಚಿತ್ತೆಲ್ಲಿತ್ತು? ಪ್ರಾಣೆಲ್ಲಿತ್ತು? ಭಾವೆಲ್ಲಿತ್ತು?
ಚಿತ್ತ ಚಿತ್ತಾಗುವದು, ಆ ಚಿತ್ತ ಪಟ್ಟಾಗುವದು.
ಇದರೊಳಗ ಭಾವೇನು ಜೀವೇನು? ಸಾವೇನು ನೋವೇನು?
ಈ ಮಾಯೆಯ ಬೆಡಗಿನ ಹೆಸರು ಮಹಾಂತ.
ಈ ಮಾಯೆ ತಾನೆ ನಿರ್ಮಾಯೆ ಆದರೆ
ಸಾವು ಇಲ್ಲಾ ಗೀವು ಇಲ್ಲಾ, ಬ್ರಹ್ಮಾಂಡವಿಲ್ಲಾ ಪಿಂಡಾಂಡವಿಲ್ಲಾ,
ನಾನೂ ಇಲ್ಲಾ ನೀನೂ ಇಲ್ಲಾ, ಶಿವನು ಇಲ್ಲಾ ಗಿವನು ಇಲ್ಲಾ.
ಮುಕ್ತಿ ಇಲ್ಲಾ ಗಿಕ್ತಿ ಇಲ್ಲಾ, ಮಾಂತ ಇಲ್ಲಾ ಗೀಂತ ಇಲ್ಲಾ.
ಇಲ್ಲಗಿಲ್ಲ ಸುಳ್ಳೆ ಸುಳ್ಳೆ ಸುಳ್ಳೇನೋ
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
Art
Manuscript
Music
Courtesy:
Transliteration
Rūpāda mēle nirūpavillā,
nirūpāda mēle rūpavillā.
Tānē rūpāyittu, tānē nirūpavāyittu.
Bēkādare bantu, sākādare hōytu.
Tā bandu hōguvadaroḷage śivabyāre, jagabyāre,
nararu byāre, suraru byāre, ihabyāre, parabyāre,
puṇya byāre, pāpa byāre, sukha byāre duḥkha byāre,
ī sarvavu byāre byāreyāgi tōruva
tanma vinōda, tannāṭa, tānendarēnu? Māye.
Māyeyendarēnu? Nirmāye.
Nirmāye endare bant'hyāṅge, hōyit'hyāṅge?
Huṭṭit'hyāṅge? Beḷīt'hyāṅge sattit'hyāṅge mahāntayōgi?
Hōgōdallā nirmāya nirvayalāda myāle baruvadalla,
allandarēnu bantu? Ēnu bantendarēnu hōyitu?
Hōgōdēnu? Barōdēnu? Barōdillā hōgōdillā.
Ēnū illā, entū illā, sum'mane parabrahma,
parabrahmembō nāmavuṇṭe? Ā parabrahma elliyittu?
Parabrahma tānāguvudakke modalē ēnembō nāmavuṇṭu?
Cittellittu? Prāṇellittu? Bhāvellittu?
Citta cittāguvadu, ā citta paṭṭāguvadu.
Idaroḷaga bhāvēnu jīvēnu? Sāvēnu nōvēnu?
Ī māyeya beḍagina hesaru mahānta.
Ī māye tāne nirmāye ādare
sāvu illā gīvu illā, brahmāṇḍavillā piṇḍāṇḍavillā,
nānū illā nīnū illā, śivanu illā givanu illā.
Mukti illā gikti illā, mānta illā gīnta illā.
Illagilla suḷḷe suḷḷe suḷḷēnō
nirupama nirāḷa mahatprabhu mahāntayōgi.