Index   ವಚನ - 60    Search  
 
ಆ ಪರಶಿವನ ಗರ್ಭದಲ್ಲಿರ್ದ ಬ್ರಹ್ಮಾಂಡದೊಳಗೆ ಪಿಂಡಾಂಡವಾದ ಪುಣ್ಯಾತ್ಮರು, ಬಿಂದುರೂಪಾಗಿ ಬಂದ ಸೂತಕ ಕಂಡು ಸಂದೇಹಗೊಂಡು, ಚಂದವಳಿದು, ಹಿಂದೆ ಬಂದಾ ಯೋನಿಯ ಕಿಸುಕುಳ ಮೂತ್ರದಕುಣಿಗೆ ಬೀಳಬಾರದೆಂದು ಹೇಯ ಹುಟ್ಟಿ ಸ್ತ್ರೀ ಭೋಗವ ಬಿಟ್ಟು, ವೈರಾಗ್ಯ ತಲಿಗೇರಿ, ಅನ್ನ ವಸ್ತ್ರವ ಕಳೆದು ಊರೊಳಗಿರಬಾರದೆಂದು ದೇಶ ಸಂಚಾರ ಮಾಡಿ, ಕಾಶಿ, ಕೇದಾರ, ರಾಮೇಶ್ವರ, ಶ್ರೀಶೈಲ, ಉಳವಿ, ಹಂಪಿ, ಗೋಕರ್ಣ ಮೊದಲಾದ ಅನಂತ ತೀರ್ಥವ ಮಿಂದು, ಸಾಯಬಾರದ ಅಂಗಸಿದ್ಧಿ, ಅಲಗುನೋಯಿಸದ ಘುಟಿಕಾಸಿದ್ಧಿ, ಹೇಳಿದ್ದಾಗುವ ವಾಕ್ಯಸಿದ್ಧಿ, ಹೆಸರುಹೇಳುವ ಬೆನಕನಸಿದ್ಧಿ, ರೋಗಕಳೆಯುವ ಮೂಲಿಕಿಸಿದ್ಧಿ, ಬೆರಗುಮಾಡುವ ಬೇತಾಳಸಿದ್ಧಿ, ಅಗ್ನಿಸ್ತಂಭನ, ಜಲಸ್ತಂಭನ, ಗಗನಕ್ಕೆ ಹಾರುವ ಯೋಗಸಿದ್ಧಿ, ದೂರದೃಷ್ಟಿ, ದೂರಶ್ರವಣ, ಸರ್ವದೃಷ್ಟಿ, ಉಂಡೂಟ, ಕಂಡ ಕನಸು, ಮನೋಬಯಕೆ, ಹಿಂದಿನ ಖೂನ, ಕನಸಸಾಕ್ಷಿ, ಇಂದ್ರಜಾಲ, ಮಹೇಂದ್ರಜಾಲ, ಸುವರ್ಣಜನನ, ಬಂಗಾಳಿ, ಮರಣಯೋಗ, ಪರಕಾಯಪ್ರವೇಶ, ರಾಜಯೋಗ, ರಾಜವಶ, ಜನವಶ, ಸ್ತ್ರೀವಶ, ಭಸ್ಮಸಿದ್ಧಿ, ಅಂಜನಸಿದ್ಧಿ, ಮೋಹನ, ವೈರಿಸ್ತಂಭನ, ವಾಯುಸ್ತಂಭನ, ಭೂತ, ಪ್ರೇತ, ಪಿಶಾಚಿ, ಬ್ರಹ್ಮರಾಕ್ಷಸ, ಜಟ್ಟಿಂಗ, ಹಿರೋಡ್ಯಾ, ಯಲ್ಲಮ್ಮಾ, ಪೋತಮ್ಮಾ, ಚಂಡಿಚಾಮುಂಡ್ಯಾದಿಗಳ ಮಾತನಾಡಿಸುವ ಮಂತ್ರಸಿದ್ಧಿ, ಹುಲಿ, ಹಲ್ಲಿ, ಕತ್ತಿ, ನರಿ, ಕಾಗಿ, ಹಾಲ್ಹಕ್ಕಿ ಮೊದಲಾದ ಮೃಗಪಕ್ಷಿಯ ಮಾತು ತಿಳಿಯುವ ಯಂತ್ರತಂತ್ರಸಿದ್ಧಿ, ಮಲಮೂತ್ರವನು ಬಿಡದ ಅಂತರಪಚನ ಅದೃಶ್ಯ ಅನಂತ ಆಹಾರ ಜೀವಸ್ತಂಭನ, ದೇವ ಪ್ರತ್ಯಕ್ಷ ಸಂಜೀವನ, ಬಂಧವಿಮೋಚನ, ದೃಷ್ಟಿ ಆಗಮನ, ಇಷ್ಟದಾಯಕ ಮನೋಗಮನ ಮೊದಲಾದ ಅನಂತ ಸಿದ್ಧಿಗಳಿಗಾಶೆ ಮಾಡಿ ಮಣ್ಣುಗಾಣದೇ ಹೋದರು ಅನಂತರು. ಅದು ಅಂತಿರಲಿ, ಫಲಪದವಿ ಪಡೆವೆವೆಂದು ಹಳ್ಳ, ಕೊಳ್ಳ, ನದಿತೀರ, ಅಡವಿ ಅರಣ್ಯ ಗುಡ್ಡ ಗಿರಿ, ಗವಿ ವಟವೃಕ್ಷ, ಸಂಗಮ, ಮಠ ಮಾನ್ಯ ಮೊದಲಾದ ಸುಸ್ಥಳದಲ್ಲಿ ಕುಳಿತು ನಿದ್ರೆ ಆಹಾರ ತೊರೆದು, ಆಸನವ ಬಲಿದು, ಮೌನ ಮುದ್ರೆಯ ಹಿಡಿದು, ವಾತ, ಅಂಬು, ಪರ್ಣ, ಕಲ್ಲು, ಹಣ್ಣು, ಬೂದಿ, ಹುಲ್ಲಿನ ರಸ, ನೆಲ, ಬೇರು, ಗಡ್ಡಿ ಮೊದಲಾದ ಆಹಾರವ ಕೊಂಡು, ಮೈಗೆ ಹುತ್ತೇರಿ, ಜಡಿಯಲ್ಲಿ ಆಲವ ಬೆಳೆದು, ಗಡ್ಡದೊಳು ಗೀಜಗವು ಮನಿ ಮಾಡಿರಲು, ಮನವಳಿಯದೆ, ಘನವ ತಿಳಿಯದೆ, ತನುವ ಉಳಿಯದೆ, ಪಂಚೇಂದ್ರಿಯ ಮಿಂಚು ತೊಳಿಯದೆ, ಹಳೆಹಂಚಾದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.