ಆ ಪರಶಿವನ ಅಷ್ಟಾಂಗದಿಂದಾದ ಬ್ರಹ್ಮಾಂಡದ
ಸ್ಥಿರ ಚರ ಪ್ರಾಣಿಗಳ ಲಯವ ನೋಡಿ ಚಿಂತೆಯೊಳಗಾಗಿ,
ಕಂತುಹರನ ಧ್ಯಾನವ ಮಾಡಲು,
ಆ ಹರ ಗುರುರೂಪವ ತಾಳ್ದು ಬಂದು,
ತನ್ನ ಚಿಂತಿಸಿದ ಸುಜ್ಞಾನಿಗಳಿಗೆ,
ಮನವನೊಬ್ಬುಳಿಗೊಳಿಸುವುದಕ್ಕೆ ಕಾರಣವೆಂದು ಹೇಳಿದ
ಷಣ್ಮುಖ, ಶಾಂಭವಿ, ಖೇಚರಿ, ಭೂಚರಿ,
ಸಾಚರಿ, ಕುರಂಗ, ಪಾಲೋತಕ, ಹಠ, ಲಯ, ಲಂಬಿಕ,
ಮೊದಲಾದ ಅನಂತ ಮುದ್ರೆಗಳ ಸಾಧಿಸಿ,
ಆ ಮುದ್ರೆ ಸಾಧನದಲ್ಲಿ ಕಂಡ, ಮಾಯ, ಛಾಯ,
ಅಭ್ರಛಾಯ, ಪುರುಷಛಾಯ, ಮಿಂಚಿನ ಛಾಯ,
ಬಳ್ಳಿಮಿರುಪಿನ ಛಾಯ, ಆರು ವರ್ಣದ ಛಾಯ,
ಮೃತ್ಯುವಿನ ಛಾಯ, ಜೀವ ಜಪ ಮರಣ ಚಿನ್ನ
ಕನಸಸಂಭ್ರಮ, ಕುಂಡಲಿನೋಟ, ಘೋಷಲಂಪಟ,
ಮಾನಸಪೂಜೆ, ಬೈಲವಾಣಿ, ಪಶ್ಚಿಮಕೋಣೆ,
ಆತ್ಮಭೆಟ್ಟಿ, ಮಂತ್ರಪಾಠ, ಒಳಬೆಳಗು, ಹೊರಬೆಳಗು
ಪರಿಪರಿಯ ಬೆರಗುಗಳ ತಿಳಿದು,
ಇದೇ ನಿಜಬ್ರಹ್ಮವೆಂದು ಹೆಮ್ಮೈಸಿ,
ಆಸೆವೊಡಿಯದೆ, ಕ್ಲೇಶ ಕಡಿಯದೆ,
ಘಾಶಿಯಾಗಿ ಹೇಸಕಿಯೊಳಗೆ ಮುಳಿಗಿ
ಮುಂದುಗಾಣದೇ ಹೋದರು
ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.