Index   ವಚನ - 7    Search  
 
ಆದಿಯಲ್ಲಿ ಪ್ರಣವಸ್ವರೂಪಮಾದ ಪರಮಾತ್ಮನು ಅಕಾರ ಉಕಾರ ಮಕಾರವೆಂಬ ಅಕ್ಷರತ್ರಯಸ್ವರೂಪಮಾಗಿ, ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ; ಬಿಂದುವೇ ಶರೀರಮಾಗಿ, ನಾದವೇ ಪ್ರಾಣಮಾಗಿ, ಕಳೆಯೇ ಮನಮಾಗಿ; ಬಿಂದುಮಯವಾದ ಶರೀರದಲ್ಲಿ ರೂಪು ನಾದಮಯಮಾದ ಪ್ರಾಣದಲ್ಲಿ ನಾಮ ಕಳಾಮಯಮಾದ ಮನದಲ್ಲಿ ಕ್ರಿಯೆ ಇಂತು ನಾಮ-ರೂಪ-ಕ್ರಿಯಾಯುಕ್ತಮಾದ ಪುರುಷನ ಶರೀರದಲ್ಲಿ ಭಕ್ತಿ, ಪ್ರಾಣದಲ್ಲಿ ಜ್ಞಾನ, ಮನದಲ್ಲಿ ವೈರಾಗ್ಯ ನೆಲೆಗೊಂಡಲ್ಲಿ, ಬಿಂದುವಿನಲ್ಲಿ ಆಚಾರಲಿಂಗಸಂಬಂಧಮಾಯಿತ್ತು, ನಾದದಲ್ಲಿ ಗುರುಲಿಂಗಸಂಬಂಧವಾಯಿತ್ತು. ಕಳೆಯಲ್ಲಿ ಶಿವಲಿಂಗಸಂಬಂಧಮಾಯಿತ್ತು. ಆಚಾರದಿಂದ ಪೂತಮಾದ ಶರೀರವೇ ಜಂಗಮಲಿಂಗಮಾಯಿತ್ತು. ಗುರುಮಂತ್ರದಿಂದ ಪೂತಮಾದ ಪ್ರಾಣವೇ ಪ್ರಸಾದಲಿಂಗಮಾಯಿತ್ತು. ಶಿವಧ್ಯಾನದಿಂದ ಪೂತಮಾದ ಪ್ರಾಣವೇ ಪ್ರಸಾದಲಿಂಗಮಾಯಿತ್ತು. ಬಿಂದುವಿನಲ್ಲಿ ಕ್ರಿಯಾಶಕ್ತಿ ನೆಲೆಗೊಂಡಲ್ಲಿ, ಆ ಬಿಂದುವೇ ಆದಿಶಕ್ತಿಮಯಮಾಯಿತ್ತು. ನಾದದಲ್ಲಿ ಮಂತ್ರಶಕ್ತಿ ನೆಲೆಗೊಂಡಲ್ಲಿ, ಆ ನಾದವೇ ಪರಾಶಕ್ತಿಯಾಯಿತ್ತು. ಕಳೆಯಲ್ಲಿ ಇಚ್ಛಾಶಕ್ತಿ ನೆಲೆಗೊಂಡಲ್ಲಿ, ಆ ಕಳೆಯೇ ಜ್ಞಾನಶಕ್ತಿಯಾಯಿತ್ತು. ಇಂತು ಶರೀರಮೇ ಜಂಗಮದಿಂದ ಪವಿತ್ರಮಾಗಿ, ಪ್ರಾಣವು ಗುರುವಿನಿಂದ ಪವಿತ್ರಮಾಗಿ, ಮನವು ಲಿಂಗದಿಂದ ಪರಿಶುದ್ಧಮಾಗಿರ್ದ ಶಿವಶರಣನು ಇದ್ದುದೇ ಕೈಲಾಸ, ಅನುಭವಿಸಿದುದೆಲ್ಲಾ ಲಿಂಗಭೋಗ, ಐಕ್ಯವೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.