Index   ವಚನ - 35    Search  
 
ಶರೀರವೇ ಸ್ಥೂಲವು, ಮನಸ್ಸೇ ಸೂಕ್ಷ್ಮವು, ಇಂದ್ರಿಯಂಗಳೇ ಶರೀರವು, ವಿಷಯಂಗಳೇ ಮನಸ್ಸು, ಮನಸ್ಸಿನಲ್ಲಿ ಧರ್ಮವು, ಕರ್ಮಮೂಲದಲ್ಲಿ ಬಿಂದುವು, ಧರ್ಮಮೂಲದಲ್ಲಿ ಜ್ಞಾನವು, ಕರ್ಮಕರ್ತೃವೇ ಇಷ್ಟವು, ಧರ್ಮಕರ್ತೃವೇ ಪ್ರಾಣವು, ಕರ್ಮಕರ್ತೃವೇ ಸಗುಣವು, ಧರ್ಮಕರ್ತೃವೇ ನಿರ್ಗುಣವು, ಕರ್ಮಕರ್ತೃವಿಗೆ ಪೃಥ್ವಿಯೇ ಸ್ಥಾನವು, ಕರ್ಮಕ್ಕೆ ಜಲವೇ ಸ್ಥಾನವು, ಧರ್ಮಕರ್ತೃವಿಗೆ ಅಗ್ನಿಯೇ ಸ್ಥಾನವು, ಧರ್ಮಕ್ಕೆ ವಾಯುವೇ ಸ್ಥಾನವು, ಧರ್ಮಕರ್ತೃ ಶಿವನು, ಕರ್ಮಕರ್ತೃ ಶೈವವು, ಮನದೊಳಗೆ ಜೀವನು ಲಿಂಗವಂ ಗ್ರಹಿಸಿದಲ್ಲಿ, ಶರೀರದೊಳಗೆಕೂಡಿ ಲಿಂಗವು ಜೀವನಂ ಗ್ರಹಿಸಿತ್ತು. ಶರೀರಸುಖವೇ ಮನದಲ್ಲಿ ಪರಿಣಾಮವಾದಂತೆ, ಇಷ್ಟಮೂರ್ತಿಯೇ ಪ್ರಾಣದಲ್ಲಿ ಸಾಧ್ಯವಾಯಿತ್ತು. ಇದೇ ಸ್ಥೂಲವು, ಅದೇ ಸೂಕ್ಷ್ಮವು. ಇವೆರಡರ ಭೇದಕ್ಕೆ ಭಾವವು ತಾನೊಂದೇ ಕಾರಣಮಾಯಿತ್ತು. ಅಂತಪ್ಪ ಸಹಸ್ರದಳರೂಪಮಪ್ಪ ಭಾವದಲ್ಲಿ ಇಷ್ಟಪ್ರಾಣಂಗಳೇಕಮಾದಲ್ಲಿ, ಆಕಾಶಮಾದ ಪ್ರಾಣವೇ ಆತ್ಮಸ್ವರೂಪಮಾದ ನಿರ್ಮಲ ಲಿಂಗಮಾಯಿತ್ತು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.