Index   ವಚನ - 36    Search  
 
ಚಂದ್ರಮಂಡಲಮಧ್ಯಸ್ಥನೇ ಶಿವನು, ಸೂರ್ಯಮಂಡಲಮಧ್ಯಸ್ಥನೇ ವಿಷ್ಣುವು, ತಮೋರೂಪಮಪ್ಪ ಸೂರ್ಯನೇ ಗರುಡನು, ಅದಕ್ಕೆ ದ್ವೈತಾದ್ವೈತಕರ್ಮಗಳೇ ಪಕ್ಷಗಳು, ಸತ್ವರೂಪಮಪ್ಪ ಚಂದ್ರನೇ ವೃಷಭವು, ಅಂತಃಕರಣಚತುಷ್ಟಯಂಗಳೇ ಪಾದಂಗಳು. ಗರುಡನು ರಜೋರೂಪಮಪ್ಪ ಪಾದಂಗಳಲ್ಲಿ ಗ್ರಹಿಸುತ್ತಿರ್ಪನು. ನಂದೀಶ್ವರನು ತಮೋರೂಪಮಪ್ಪ ಶೃಂಗಂಗಳಿಂದ ಸಂಹರಿಸುತ್ತಿರ್ಪನು. ಅದಕ್ಕೆ ಚಂದ್ರಮಂಡಲದಲ್ಲಿರ್ಪ ಕಾಳಿಯೂ, ಸೂರ್ಯಮಂಡಲದಲ್ಲಿರ್ಪ ಲಕ್ಷ್ಮಿಯೂ ಪ್ರತ್ಯಕ್ಷವು. ಆ ಚಂದ್ರನು ವಿಷ್ಣುರೂಪಮಪ್ಪ ರಾತ್ರಿಯಲ್ಲಿ ಭೇದದಿಂ ವರ್ತಿಸುತ್ತಿಹನು. ಶಿವಸ್ವರೂಪಮಾದ ಅಹಸ್ಸಿನಲ್ಲಿ ಸೂರ್ಯನು ಅಭೇದದಿಂ ವರ್ತಿಸುತ್ತಿಹನು. ಅಂತಪ್ಪ ಜಾಗ್ರದಲ್ಲಿ ತಮೋರೂಪಮಪ್ಪ ಬಾಹ್ಯಕರ್ಮವನಾಚರಿಸುತ್ತಿಹರು. ರಾತ್ರಿಯಲ್ಲಿ ಸತ್ಯಸ್ವರೂಪಮಪ್ಪ ಶರೀರಧರ್ಮವನಾಚರಿಸುತ್ತಿಹರು. ಧರ್ಮಮುಖದಲ್ಲಿ ಸತ್ಯವಂ ಬಿಡುತ್ತಿಹರು, ಕರ್ಮಮುಖದಲ್ಲಿ ತಮಸ್ಸಂ ಬಿಡುತ್ತಿಹರು. ಆ ಸತ್ವವಂ ಬಿಡಿಸುವ ಭಕ್ತಿಯೇ ಶಿವಸ್ವರೂಪು, ತಮಸ್ಸಂ ಬಿಡಿಸುವ ಜ್ಞಾನವೇ ವಿಷ್ಣುಸ್ವರೂಪು. ಅಂತಪ್ಪ ಭಕ್ತಿಯ ಬಹಿರ್ಮೂರ್ತಿಯಪ್ಪ ಶಿವನಲ್ಲಿ ಸೇರಿ, ಅಂತಪ್ಪ ಜ್ಞಾನದ ಅಂತರ್ಮೂರ್ತಿಯಪ್ಪ ವಿಷ್ಣುವಿನಲ್ಲಿ ಸೇರಿ, ಬಹಿರಂತರ ಶಿವಶಕ್ತಿಸಂಗಮದಲ್ಲಿ ನಿಜಾನಂದಸುಖವು ಪ್ರಕಾಶಮಾಯಿತ್ತು. ಜ್ಞಾನದಲ್ಲಿ ಜೀವನು ಕೂಡಿ ಅಭೇದಮಾಯಿತ್ತು, ಭಕ್ತಿಯಲ್ಲಿ ಶರೀರವು ಕೂಡಿ ಭಿನ್ನಚತುರ್ವಿಧ ಫಲಪದವಿಗಳಾಯಿತ್ತು. ಮೋಕ್ಷದಲ್ಲಿ ಶಿವಭಕ್ತರು ನಿರ್ವಾಣಶಕ್ತಿಸುಖಂಗಳನನುಭವಿಸುತ್ತಿರ್ಪರು, ಫಲಪದವಿಗಳಲ್ಲಿ ವಿಷ್ಣುಭಕ್ತರು ಅಲಂಕೃತ ಶಿವಗುಣಸುಖಗಳನನುಭವಿಸುತ್ತಿರ್ಪರು. ವಿಷ್ಣುಗುಣರೂಪಮಪ್ಪ ಪರಲೋಕಕ್ಕೆ ಶಿವನೇ ಅಧಿಪತಿಯಾಗಿಹನು. ಮನುಷ್ಯರೆಲ್ಲಾ ವಿಷ್ಣುಭಕ್ತರು, ದೇವತೆಗಳೆಲ್ಲಾ ಶಿವಭಕ್ತರು. ವಿರಕ್ತರಾಗಿರ್ದು ಶಕ್ತಿಯುತರಾಗಬಾರದು, ಅನಾಯಾಸದಲ್ಲಿ ಶಕ್ತ್ಯೈಶ್ವರ್ಯಸುಖಗಳು ಬಂದರೆ ಲಿಂಗಮುಖವಾದ ಜಂಗಮಕ್ಕೆ ನೀಡಬೇಕು. ಕರ್ಮವೇ ವಿಷ್ಣವು, ಧರ್ಮವೇ ಶಿವನು. ಕರ್ಮಹೀನರು ನರಕವನ್ನನುಭವಿಸುತ್ತಿಹರು. ವಿಷ್ಣುಭಕ್ತನು ಮನುಷ್ಯರಿಂದ ಪೂಜ್ಯನಪ್ಪ ಮಹಾರಾಜನಾಗಿ ಹುಟ್ಟುವನು. ಶಿವಭಕ್ತನು ದೇವತೆಗಳಿಂದ ಪೂಜ್ಯನಪ್ಪ ಸದ್ಗುಣೈಶ್ವರ್ಯಸಂಪನ್ನನಾಗಿ ಹುಟ್ಟುವನು. ಇಂತೀ ಬಿನ್ನವಿಸಿರ್ಪ ಸ್ಥೂಲಸೂಕ್ಷ್ಮಮಪ್ಪ ಶಿವಭಕ್ತಿಭೇದವನ್ನು ಕಾರಣಭಾವದಲ್ಲಿ ಭೇದಿಸಿ, ಒಂದೊಂದಾಗಿ ಸಿಕ್ಕುಬಿಡಿಸಿ, ಆಯಾ ವಸ್ತುಗಳ ಸಂಬಂಧವನ್ನರಿತು ತೆಗೆದು, ಸಂಬಂಧವಸ್ತುಗಳಲ್ಲಿ ಬೆರಸಿ, ಇದು ಶಕ್ತಿ ಇದು ಶಿವನು ಎಂಬುದನ್ನು ಏರ್ಪಾಟುಮಾಡಿ, ಶಿವನೇ ಪ್ರಾಣಮಾಗಿ, ಶಕ್ತಿಯೇ ಶರೀರಮಾಗಿ, ಕಾರಣ ಭಾವದಲ್ಲಿ ಎರಡೂ ಏಕಮಾದಲ್ಲಿ ರಜೋರೂಪಮಪ್ಪ ಮನವಳಿದು, ತಮೋರೂಪಮಪ್ಪ ಶಕ್ತಿಯು ಸರ್ವಸ್ವರೂಪಮಪ್ಪ ಶಿವನೊಳಗೆ ಲೀನಮಾಯಿತ್ತು. ಅದೆಂತೆಂದೊಡೆ: ಸ್ವಪ್ನವಳಿದು ಸುಷುಪ್ತಿಯು ಜಾಗ್ರದೊಳಗೆ ಬಿಂದುಭೇದದೋರದಿರ್ಪಂದದಿ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.