Index   ವಚನ - 38    Search  
 
ವಟಮೂಲವಾಸಿಯಪ್ಪ ಗುರುವು ಮಂತ್ರಶಕ್ತಿಯನಂಗದಲ್ಲಿ ಧರಿಸಲು ತತ್ಕೃಪಾಬಿಂದುವೇ ಮೂರ್ತಿಗೊಂಡಂತೆ, ಕರಕಮಲದಲ್ಲಿ ಪ್ರಾದುರ್ಭವಿಸಿದ ಶರಣನು ತತ್ಪ್ರಸಾದವಾಕ್ಯಾಮೃತವನುಂಡು ಬೆಳೆದು, ನಿಜವಾಸನೆಯಿಂ ಸ್ವಭಾವ ಯೌವನ ಪ್ರಾರಂಭದಲ್ಲಿ ತನುವೇ ಘನವಾಗಿ, ಪರಮಪವಿತ್ರತ್ವದಿಂ ಪ್ರಕಾಶಿಸುತ್ತಿರಲು, ಚಿದಂಬರಮಂ ದೆಶೆವಿಡಿದುಟ್ಟು, ತತ್ವದ ತೊಡವೆಗಳಂ ತೊಟ್ಟು, ಸರ್ವಾಲಂಕಾರಶೋಭಿನಿಯಾಗಿರ್ಪ ಭಕ್ತಿಸುತೆಯಂ ದೇಶಿಕಂ ನೋಡಿ, ತದ್ವಟಫಲಾನುಭವಕಾರಣ ಜಂಗಮರೂಪಮಾಗಿ, ಆದಿಶಕ್ತಿಸಂಗದಿಂ ಪ್ರಕಾಶಿಸುತ್ತಿರ್ಪ ಮಹತ್ಪದದಲ್ಲಿ ಸ್ವಪ್ರಕಾಶಮೇ ಮೂರ್ತಿಗೊಂಡು ಜನಿಸಿ, ಭಾವದಲ್ಲಿ ಬೆಳೆದು ತುರ್ಯ ಯೌವನದಲ್ಲಿ ಪರಮಸತ್ವಧೌತಾಂಬರವನುಟ್ಟು, ಅಹೀನಾಭರಣನಾಗಿರ್ಪ ಲಿಂಗಮಂ ಪ್ರಾರ್ಥಿಸಿ, ವರದಕ್ಷಿಣೆಯನಿತ್ತು, ಬಿಜಯಂಗೈದ ದೇಶಿಕಾರ್ಯನು ಲಿಂಗಮೂರ್ತಿಯಪ್ಪ ಜಾಮಾತೃವಿನ ಪಾದಗಳನ್ನರ್ಚಿಸಿ, ಬಿಂದುಮಧ್ಯದಲ್ಲಿ ನಾದರೂಪನಾಗಿರ್ದ ಲಿಂಗಕ್ಕೆ, ನಾದಮಧ್ಯದಲ್ಲಿ ಬಿಂದುರೂಪಮಾಗಿರ್ಪ ಭಕ್ತಿಸುತೆಯಂ ವಿಧ್ಯುಕ್ತವಾಗಿ ಧಾರೆಯನ್ನೆರೆದು, ಪಾಣಿಗ್ರಹಣಮಂ ಮಾಡಿಕೊಡಲು, ಆ ಶರಣನೇ ಸತಿ ಲಿಂಗವೇ ಪತಿಯಾಗಿ, ಈರ್ವರಿಗೂ ಯೌವನಕಲೆಗಳೊಂದಾಗಿ, ಪರಮಾನಂದರತಿಕ್ರೀಡಾ ಪತಿವೃತಾಚರಣೆಯೇ ಕರಣಮಾಗಿರಲಾಶರಣನು ಉಭಯಕುಲದ ಹಿರಿಯರಿಗೂ ಆತಿಥ್ಯಾದಿಸತ್ಕಾರಮಂ ಮಾಡುತ್ತಾ, ಉಭಯಕುಲಂಗಳಂ ಸ್ವಧರ್ಮಂಗಳಿಂ ಪರಿಶುದ್ಧಮಂ ಮಾಡುತ್ತಾ, ಪತಿಯ ಸ್ವಭಾವವನ್ನು ನಿಜಭಾವದಿಂದ ತಿಳಿದು, ತದನುಕೂಲಕರ್ಮಂಗಳನೆಸಗುತ್ತಾ, ಸರ್ವಮಂಗಳರೂಪಮಾಗಿ ಅಕಲ್ಮಷಾಂತಃಕರಣದಿಂದಾಚರಿಸುತ್ತಿರಲು, ಪತಿಯು ಪ್ರಸನ್ನನಾಗಿ, ಅಂತರಂಗದಲ್ಲಿ ನಿರ್ವಾಣರತಿಸುಖದಲ್ಲಿ ಕ್ರೀಡಿಸಿ, ವೈರಾಗ್ಯವೆಂಬ ಪುತ್ರನಂ ಪಡೆದು, ಅವಂಗೆ ಮೋಕ್ಷಸಾಮ್ರಾಜ್ಯಪಟ್ಟವಂ ಕಟ್ಟಿ, ತಾವಿಬ್ಬರೊಂದಾಗಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.