Index   ವಚನ - 39    Search  
 
ಶಿವಬಿಂದುವೇ ಚಂದ್ರಸ್ವರೂಪು, ಶಕ್ತಿಬಿಂದುವೇ ಸೂರ್ಯಸ್ವರೂಪು. ಇವು ಶ್ವೇತರಕ್ತವರ್ಣಂಗಳಾಗಿಹವು. ಅದೆಂತೆಂದೊಡೆ: ವರ್ಷಕ್ಕೊಂದೊಂದು ಕಳೆಯ ಲೆಕ್ಕದಲ್ಲಿ ಷೋಡಶಕಳಾಪರಿಪೂರ್ಣವಾದಲ್ಲಿ, ಪುರುಷಂಗೆ ಯೌವನೋದಯಮಾಗಿತ್ತು. ಸ್ತ್ರೀಗೆ ವರ್ಷಕ್ಕೊಂದೊಂದಾಗಿ ದ್ವಾದಶಮೂರ್ತಿಗಳೇಕಮಾದಲ್ಲಿ ದ್ವಾದಶಸಂವತ್ಸರದಲ್ಲಿ ಯೌವನೋದಯಮಾಯಿತ್ತು. ಸ್ತ್ರೀಯಲ್ಲಿ ಹನ್ನೆರಡುಕಳೆಗಳೂ, ಪುರುಷನಲ್ಲಿ ಹದಿನೈದು ಕಳೆಗಳೂ ಕೂಡಿ, ಈ ಇಪ್ಪತ್ತೆಂಟು ಕಳೆಗಳೇ ಇಪ್ಪತ್ತೆಂಟು ಮಹಾನಕ್ಷತ್ರಂಗಳಾದವು. ಈ ಎರಡರ ಸಂಗವೇ ಅಮಾವಾಸ್ಯೆಯಾಯಿತ್ತು. ಸ್ತ್ರೀಗೆ ಶರೀರವೇ ಸೂರ್ಯಸ್ವರೂಪು, ಮನಸ್ಸೇ ಚಂದ್ರಸ್ವರೂಪು. ಪುರುಷನಿಗೆ ಶರೀರವೇ ಚಂದ್ರಸ್ವರೂಪು, ಮನಸ್ಸೇ ಸೂರ್ಯಸ್ವರೂಪು. ಸೂರ್ಯಮಂಡಲವು ಕೆಳಗಾಗಿಯೂ, ಚಂದ್ರಮಂಡಲವು ಮೇಲಾಗಿಯೂ ಇರ್ಪ ದೇವಲೋಕವೇ ಸ್ತ್ರೀ. ಚಂದ್ರಮಂಡಲವು ಕೆಳಗೂ, ಸೂರ್ಯಮಂಡಲವು ಮೇಲಾಗಿಯೂ ಇರ್ಪ ಮರ್ತ್ಯಲೋಕವೇ ಪುರುಷನು. ಈ ಎರಡಕ್ಕೂ ಪಾತಾಳಲೋಕದಲ್ಲಿ ಸಂಬಂಧವುಂಟಾಗಿ ಸೃಷ್ಟಿಯೂ, ಮತ್ರ್ಯಲೋಕದಲ್ಲಿ ಸ್ಥಿತಿಯೂ, ದೇವಲೋಕದಲ್ಲಿ ಸಂಹಾರವೂ ಆಗುತ್ತಿರ್ಪ ವಿಚಾರವನ್ನು ಗುರೂಪದೇಶದಿಂದ ತಿಳಿದು, ಆ ಗುರುಕರುಣದಿಂ ದೇವಲೋಕದೊಳಿರ್ಪ ಜಾಗ್ರವನ್ನೂ ಮತ್ರ್ಯಲೋಕದಲ್ಲಿರ್ಪ ಸ್ವಪ್ನವನ್ನೂ ಪಾತಾಳಲೋಕದಲ್ಲಿರ್ಪ ಸುಷುಪ್ತಿಯನ್ನೂ ಮೀರಿದ ತೂರ್ಯಾತೀತಲಿಂಗಮಂ ಪಡೆದು, ಮರ್ತ್ಯಲೋಕದ ಸತ್ಕರ್ಮಂಗಳಿಂ ಸ್ವರ್ಗಲೋಕದ ಭೋಗವನ್ನೂ ಪಾತಾಳಲೋಕದಾನಂದವನ್ನೂ ನಿರಹಂಭಾವದಿಂದರಿದರ್ಪಿಸಿ, ತಲ್ಲಿಂಗಪ್ರಸಾದೋಪಭೋಗಿಯಾದ ಶರಣನೇ ನಿರ್ಲೇಪನಾಗಿ ನಿಜಾನಂದನಿಶ್ಚಿಂತಸುಖದೊಳಾಡುತ್ತಿರ್ಪನು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.