Index   ವಚನ - 41    Search  
 
ಬಾಲ್ಯವೇ ಬ್ರಹ್ಮಸ್ವರೂಪು, ಯೌವನವೇ ವಿಷ್ಣುಸ್ವರೂಪು, ವಾರ್ಧಕ್ಯವೇ ಮಹೇಶ್ವರಸ್ವರೂಪು. ಬಾಲ್ಯದಲ್ಲಿ ಗುರುವೆಂಬ ಆರಂಭಗಾರನು ತನ್ನಲ್ಲಿ ಬಿತ್ತಿದ ವಿದ್ಯಾಬೀಜಂಗಳು ಯೌವನದಲ್ಲಿ ಬೆಳೆದು ಪಲ್ಲವಿಸಿ, ವಾರ್ಧಕ್ಯದಲ್ಲಿ ಫಲಿಸಿ ಪರಿಪಕ್ವಮಾಗಿ, ಶರೀರಾಂತ್ಯದಲ್ಲಿ ಅನುಭವಕ್ಕೆ ಬರುತ್ತಿರ್ಪುದಾದಕಾರಣ, ಬಾಲ್ಯದಲ್ಲಿ ಹರಿತವರ್ಣ, ಯೌವನದಲ್ಲಿ ಶ್ಯಾಮವರ್ಣ, ವಾರ್ಧಕ್ಯದಲ್ಲಿ ಪಾಂಡುವರ್ಣವಪ್ಪುದರಿಂ, ಬಾಲ್ಯ ಯೌವನ ವಾರ್ಧಕ್ಯಂಗಳು ತ್ರಿಮೂರ್ತಿಸ್ವರೂಪಮಾಯಿತ್ತು. ಬಾಲ್ಯದಲ್ಲಿ ಕಾಲಮಧಿಕಮಾಯಿತ್ತು, ಯೌವನದಲ್ಲಿ ಕಾಮಮಧಿಕಮಾಯಿತ್ತು, ಮಹೇಶ್ವರರೂಪಮಾದ ವಾರ್ಧಕ್ಯದಲ್ಲಿ ಲಯವನೈದುತ್ತಿರ್ಪವಾದಕಾರಣ ಬ್ರಹ್ಮವಿಷ್ಣುಗಳು ಲಯವನೈದುತ್ತಿಹುದು ನಿಶ್ಚಯಮಾಯಿತ್ತು. ಬಾಲ್ಯವು ಪಾಪಪುಣ್ಯರಹಿತಮಾಗಿಹುದು, ಕಾಮೋಪಲಾಲನ ಪಾಪೋತ್ಕೃಷ್ಟಮಪ್ಪ ಯೌವನವೇ ವಿಷ್ಣುವಾದುದರಿಂದ ತದರ್ಚನೆಯೇ ಪ್ರಾಪಂಚಿಕಮಾಗಿಹುದು. ಪುಣ್ಯೋತ್ಕೃಷ್ಟಮಪ್ಪ ವಾರ್ಧಕ್ಯವೇ ಶಿವನಾದುದರಿಂದ ತದರ್ಚನೇಯೇ ಜ್ಞಾನಸ್ವರೂಪಮಾಗಿ ಮೋಕ್ಷಸಾಧನವಹುದು. ಇಂತಪ್ಪ ಬಾಲ್ಯ ಯೌವನ ವಾರ್ಧಕ್ಯಗಳನ್ನು ಜಾಗ್ರತ್ಸ್ವಪ್ನ ಸುಷುಪ್ತಿಗಳಲ್ಲಿ ಜೀವನು ಅನುಭವಿಸುತ್ತಾ, ತನ್ನ ನೈಜಸ್ವರೂಪಮಪ್ಪ ತೂರ್ಯಾವಸ್ಥೆಯಲ್ಲಿ ಲಯವಂ ಹೊಂದುತ್ತಾ, ಅವಸ್ಥಾತ್ರಯಂಗಳನ್ನು ಅನುಭವಿಸುತ್ತಿರ್ಪನು. ಅವಸ್ಥಾಕ್ರಮವೆಂತೆಂದೊಡೆ: ಪೃಥ್ವಿಯ ಸೃಷ್ಟಿಯೇ ಸ್ವಪ್ನವು, ಜಲದ ಸ್ಥಿತಿಯೇ ಜಾಗ್ರವು, ಅಗ್ನಿಯ ಸಂಹಾರವೇ ಸುಷುಪ್ತಿಯು, ವಾಯುವಿನ ತೂರ್ಯವೇ ಜೀವಂಗೆ ಮರಣವು, ಇದೇ ತೂರ್ಯಮಾಯಿತ್ತು. ಇಂತಪ್ಪ ಜೀವನು ಗುರುಕರುಣದಿಂ ಆಕಾಶದ ತೂರ್ಯಾತೀತವನೊಂದಿ, ಲಿಂಗವೇ ಪತಿ ತಾನೇ ಸತಿಯಾಗಿ, ತದಾತ್ಮನಲ್ಲಿ ಬೆರೆದು, ಭೇದದೋರದಿರ್ಪುದೇ ಲಿಂಗೈಕ್ಯಾವಸ್ಥೆಯು. ಇಂತಪ್ಪ ಲಿಂಗೈಕ್ಯಾವಸ್ಥೆಯು ವಾಙ್ಮನಕ್ಕಗೋಚರವಭೇದ್ಯವಸಾಧ್ಯಮೆನಗೂ ಪೊಗಳಲಳವಲ್ಲ, ಲಿಂಗ ತಾನೇ ಬಲ್ಲ ಕಾಣಾ, ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.