Index   ವಚನ - 66    Search  
 
ಪೃಥ್ವಿಯಪ್ಪುಗಳಿಂದ ಸ್ಥೂಲ ಶರೀರವು, ಅಗ್ನಿವಾಯುಗಳಿಂದ ಸೂಕ್ಷ್ಮಶರೀರವು, ಆಕಾಶಾತ್ಮಗಳಿಂದ ಕಾರಣಶರೀರವು. ಸ್ಥೂಲಶರೀರದಲ್ಲಿ ಜೀವನು ವಾಯುರೂಪಿಯಾಗಿಹನು, ಸೂಕ್ಷ್ಮಶರೀರದಲ್ಲಾಕಾಶರೂಪಾಗಿಹನು, ಕಾರಣಶರೀರದಲ್ಲಿ ಸ್ವಯಂಪ್ರಕಾಶಮಾಗಿಹನು. ಸ್ಥೂಲಶರೀರವು ಪೂರ್ವಮುಖಮಾಗಿ, ಸ್ವಲ್ಪಕಾಲ ಸ್ವಲ್ಪಸುಖ ಸ್ವಲ್ಪದುಃಖಗಳನನುಭವಿಸುತ್ತಿಹುದು. ಕಾರಣಶರೀರವು ಪಶ್ಚಿಮಮುಖವಾಗಿ ಸುಖದುಃಖಕಾಲಂಗಳಿಲ್ಲದೆ ನಿಜಸುಖನನುಭವಿಸುತ್ತಿಹುದು. ಸ್ಥೂಲಶರೀರವು ಕ್ರಿಯಾಜನ್ಯವಾದುದು, ಸೂಕ್ಷ್ಮಶರೀರವು ಕರ್ಮಜನ್ಯವಾದುದು. ಕಾರಣಶರೀರವು ಜ್ಞಾನಜನ್ಯವಾದುದು. ಅಂತಪ್ಪ ಕ್ರಿಯಾಜನ್ಯವೇ ಕರ್ಮ, ಕರ್ಮಜನ್ಯವೇ ಜ್ಞಾನ. ಇಂತು ನಾಲ್ಕು ದಿಕ್ಕುಗಳಲ್ಲಿ ನಾಲ್ಕುಬಗೆಯಾಗಿರ್ಪ ನನ್ನ ಸ್ಥೂಲಸೂಕ್ಷ್ಮಕಾರಣಂಗಳ ನಡುವೆ ಪ್ರಕಾಶಿಸುತ್ತಿರ್ಪ ಮಹಾಲಿಂಗವೇ ನೀನು. ನಾನು ಸುತ್ತಿ ಬಪ್ಪ ತಾವೆಲ್ಲವಂ ನೀನು ಒತ್ತಿಲೆ ತೋರುತಿರ್ಪ. ಒತ್ತಲಿರ್ಪ ನಿನ್ನ ಕಾಣದೆ ಸುತ್ತಿ ಬಳಲುತ್ತಿರ್ಪ ಕೋಟಲೆಗಲಸಿ, ಗುರುವೇ ನಿನ್ನ ಕರುಣದಿಂ ಪಶ್ಚಿಮಭಾಗವಂ ಸೇರಿ ನೋಡಿದಲ್ಲಿ, ಕರತಲಾಮಲಕದಂತೆ ನೀನು ನನಗೆ ಪ್ರಸನ್ನನಾದೆಯಯ್ಯಾ. ನಿನ್ನ ದಿವ್ಯ ಮಂಗಲಮೂರ್ತಿಯನು ಕರ್ಮರಹಿತ ಜ್ಞಾನದೃಷ್ಟಿಯಿಂ ನೋಡಿ ನೋಡಿ, ನಿಜಸುಖದೊಳೋಲಾಡಿಯಾಡಿ, ನಿನ್ನ ಸಮರಸುಖಾನಂದದೊಳು ಬೆರೆದು ಮರದಿರ್ಪುದೇ ನಿರ್ವಾಣವು. ಅಂತಪ್ಪ ಕೈವಲ್ಯಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.