Index   ವಚನ - 67    Search  
 
ಪೂರ್ವ ದಕ್ಷಿಣೋತ್ತರದ ಪಶ್ಚಿಮದೇಶಗಳೊಳು ಆ ಪಶ್ಚಿಮವೇ ಪ್ರಮಥಲೋಕ; ಅಲ್ಲಿರ್ಪರೆಲ್ಲಾ ತುರ್ಯಾವಸ್ಥೆಯಲ್ಲಿರ್ಪ ಶಿವಶರಣರು. ಮುಂದೆ ಮೂರುದಿಕ್ಕುಗಳು ಸ್ವರ್ಗ ಮರ್ತ್ಯ ಪಾತಾಳ ಸತ್ವರಜಸ್ತಮೋರೂಪಗಳಾದ ಜಾಗ್ರತ್ಸ್ವಪ್ನ ಸುಷುಪ್ತಿಗಳೊಳಗೆ ಕೂಡಿಹವು. ಅದಕ್ಕೆ ಬ್ರಹ್ಮ ವಿಷ್ಣು ರುದ್ರಾದಿಗಳಾಗಿ, ಸೃಷ್ಟಿ ಸ್ಥಿತಿ ಸಂಹಾರಗಳಂ ಮಾಡುತ್ತಿಹರು. ಪೂರ್ವದಿಗ್ಭರಿತಮಾದ ಮರ್ತ್ಯದಲ್ಲಿಪ್ಪ ಶರೀರಕ್ಕೆ ಜೀವನು ವಾಯುವ್ಯದಲ್ಲಿ ವಾಯುರೂಪಾಗಿಹನು, ನೈರುತ್ಯದಲ್ಲಿ ಪಿಶಾಚರೂಪಮಾಗಿಹನು, ಆಗ್ನೇಯದಲ್ಲಿ ತೇಜೋರೂಪಮಾಗಿಹನು. ಪ್ರಮಥರಿಗೆ ಪ್ರಾಣವೇ ಶಿವನಾದುದರಿಂದ, ಶಿವಭಕ್ತರಿಗೆ ಲಿಂಗವೇ ಪ್ರಾಣವಾಯಿತ್ತು. ಅಂತಪ್ಪ ಈಶ್ವರಸ್ವರೂಪಮಾದ ಲಿಂಗವೇ ಇಷ್ಟ, ಮಧ್ಯದಲ್ಲಿ ತೋರುತ್ತಿರ್ಪ ಸದಾಶಿವನೇ ಪ್ರಾಣ, ಊರ್ಧ್ವದಲ್ಲಿರ್ಪ ತೂರ್ಯಾತೀತ ಪರಮತೃಪ್ತಿಸ್ವರೂಪಮಾದ ಉಪಮಾತೀತನೇ ಭಾವ. ಕೇವಲನಿಷ್ಕಲಸ್ವರೂಪಮಾದ ಉಪಮಾತೀತಭಾವವು ಸಕಲನಿಷ್ಕಲಮಾದಸ್ವರೂಪಮಾದ ರುಚ್ಯನುಭವದಿಂ ಭೋಗಲಿಂಗಮಾಗಲು, ಹೃದಯದಲ್ಲಿರ್ಪ ಸದಾಶಿವನೇ ಪ್ರಾಣ, ಸಕಲತತ್ವರೂಪಮಾಗಿ ರೂಪಾನುಭವಕಾರಣಮಾಗಿ ಈಶಾನ್ಯದಿಕ್ಕಿನಲ್ಲಿ ತೋರ್ಪ ಉತ್ತರಾಗ್ರಸ್ಥಿತಮಾದ ಸಾಕಾರಮೂರ್ತಿಯೇ ಇಷ್ಟ. ಇಂತೀ ಇಷ್ಟಲಿಂಗದ ಕ್ರಿಯಾಪೂಜೆಯಿಂ ಮರ್ತ್ಯದಲ್ಲಿ ಸೃಷ್ಟಿಹೇತುವಾದ ರುದ್ರನಂ ಜಯಿಸಿ, ಸೃಷ್ಟಿ ಸ್ಥಿತಿ ಸಂಹಾರಕೋಟಲೆಯಂ ಕಳೆದು, ತೂರ್ಯಾವಸ್ಥೆಯಲ್ಲಿ ಇಷ್ಟರೂಪಮಾಗಿ ಪ್ರಸನ್ನನಾದ ನಿನ್ನಂ ನೋಡಿ, ಮೋಹಿಸಿ, ತೂರ್ಯಾತೀತದಲ್ಲಿ ಪ್ರಾಣಲಿಂಗಮಾಗಿರ್ಪ ನಿನ್ನೊಳಗೆ ನಾನು ಕೂಡಿ, ಭೋಗಿಸಿ, ಭಾವಲಿಂಗಮಾಗಿರ್ಪ ನೀನೇ ನಿಜಸುಖವನಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.