Index   ವಚನ - 69    Search  
 
ಪೃಥಿವ್ಯಪ್ತೇಜೋವಾಯ್ವಾಕಾಶಂಗಳೈದು ಶರೀರಮಹದಹಂಕಾರ ಪ್ರಕೃತಿಗಳೊಳಗೆ ಸೇರಲು, ಮಹತ್ತೇ ಜೀವ ಪರಮರಾಗಿ, ಪ್ರಕೃತಿಯೇ ಮನ ಬುದ್ಧಿಗಳಾಗಿ, ಅಹಂಕಾರವೇ ಚಿದಹಂಕಾರವಾಗಲು, ಮನ ಬುದ್ಧಿ ಚಿತ್ತಹಂಕಾರಂಗಳೇ ಅಂತಃಕರಣಗಳು, ತದನುಭವಕರ್ತನೇ ಜೀವನು, ತತ್ಸಾಕ್ಷಿಕಾರಣಮಾಗಿರ್ಪನೇ ಪರಮನು. ಮನ ಬುದ್ಧಿಗಳು ಉತ್ಕೃಷ್ಟ ಕಾರ್ಯವನೆಸಗುತ್ತಿರ್ಪುದರಿಂ ಅಹಂಕಾರಮೆನಿಸಿತ್ತು. ಜೀವಪರಮರೆಲ್ಲಕ್ಕೂ ತಾವೇ ಕಾರಣರಾಗಿ, ತಮಗಿಂತಲೂ ದೊಡ್ಡಿತ್ತಾದ ವಸ್ತು ಮತ್ತೊಂದಿಲ್ಲದಿರ್ಪುದರಿಂ ಮಹತ್ತಾಗಿತ್ತು. ಆ ಮಹತ್ತೇ ಆತ್ಮನು, ಆದುದರಿಂ ಜೀವಾತ್ಮನೇ ಶಿವನು, ಮನ ಬುದ್ಧಿಗಳೇ ವಿಷ್ಣುವು, ಚಿದಹಂಕಾರಗಳೇ ಬ್ರಹ್ಮನು. ಆ ಚಿದಹಂಕಾರಗಳೆರಡೂ ಮನ ಬುದ್ಧಿಗಳಿಗೆ ಶಕ್ತಿಯಾಗಿಹವು, ಆ ಮನಬುದ್ಧಿಗಳೆರಡೂ ಜೀವಪರಮರಿಗೆ ಶಕ್ತಿಯಾಗಿಹವು, ಆ ಜೀವಪರಮರೇ ಚಿದಹಂಕರಾಗಳಿಗೆ ಶಕ್ತಿಯಾಗಿಹವು, ಜೀವನೇ ಸಗುಣ, ಪರಮನೇ ನಿರ್ಗುಣ, ಬುದ್ಧಿಯೇ ಸಗುಣ, ಮನವೇ ನಿರ್ಗುಣ, ಜ್ಞಾನವೇ ಸಗುಣ, ಅಹಂಕಾರವೇ ನಿರ್ಗುಣ, ನಿರ್ಗುಣಂಗಳಲ್ಲಿ ಸಗುಣಂಗಳು ಸೃಷ್ಟಿ ಸ್ಥಿತಿ ಸಂಹಾರಗಳಂ ಹೊಂದುತ್ತಿರ್ಪವು, ಸಗುಣ ನಿರ್ಗುಣಗಳಿಂ ಸತ್ಕೃತ್ಯ ದುಷ್ಕೃತ್ಯರೂಪಂಗಳಾಗಿಹವು. ಆ ದುಷ್ಕೃತ್ಯವು ನಿಜವಂ ಹೊಂದದೇ ಇಹುದು. ಸತ್ಕೃತ್ಯವು ನಿಜವಂ ಹೊಂದಿ ಹೊಂದದೇ ಇಹುದು. ದುಷ್ಕೃತ್ಯದಿಂ ನಿಜ ಸಾಧ್ಯಮಲ್ಲ. ಸತ್ಕೃತ್ಯದಿಂ ನಿಜವು ಸಾಧ್ಯಮಪ್ಪದು, ಸಾಧ್ಯಮಾದಲ್ಲಿ ನಿಜವೇ ತಾನಾಗಿಹುದು. ಅಂತಃಕರಣಂಗಳು ಜೀವಪರಮರ ಭೇದಾಭೇದಂಗಳಿಗೆ ತಾವು ಸಾಧನಭೂತಂಗಳಾಗಿಹವು; ಸಾಧ್ಯವಾದಲ್ಲಿ ಸಾಧನದ್ರವ್ಯಂಗಳು ಅಪ್ರಯೋಜಕವಾಗಿರ್ಪಂದದಿ ಜೀವಪರಮರೇಕಮಾದಲ್ಲಿ ಅಂತಃಕರಣದೋಷಂಗಳು ಅಪ್ರಯೋಜಕಂಗಳಾಗಿ ಮಿಥ್ಯಾಭೂತಂಗಳಾಗಿಹವು. ಅಂತಪ್ಪ ಜೀವಪರಮರಸಂಗವೇ ಮೋಕ್ಷವು. ಅಂತಪ್ಪ ನಿಜಾನಂದ ನಿರ್ವಾಣಸುಖವೆನಗೆ ಸಾಧ್ಯಮಪ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.