Index   ವಚನ - 70    Search  
 
ಪೃಥ್ವಿಯೇ ಶೂದ್ರನು, ಜಲವೇ ವೈಶ್ಯನು, ಅಗ್ನಿಯೇ ಕ್ಷತ್ರಿಯನು, ವಾಯುವೇ ಬ್ರಾಹ್ಮಣನು. ಸ್ಥೂಲಶರೀರವೇ ಶೂದ್ರನು, ಸೂಕ್ಷ್ಮಶರೀರವೇ ವೈಶ್ಯನು, ಕಾರಣಶರೀವೇ ಕ್ಷತ್ರಿಯನು, ಜೀವನೇ ಬ್ರಾಹ್ಮಣನು. ಬ್ರಾಹ್ಮಣರಿಗೆ ಋಗ್ವೇದವು, ಕ್ಷತ್ರಿಯರಿಗೆ ಯಜುರ್ವೇದವು, ವೈಶ್ಯರಿಗೆ ಸಾಮವೇದವು, ಶೂದ್ರರಿಗೆ ಅಥರ್ವಣವೇದವು. ಶೂದ್ರರಿಗೆ ಧರ್ಮವು, ವೈಶ್ಯರಿಗೆ ಅರ್ಥವು, ಕ್ಷತ್ರಿಯರಿಗೆ ಕಾಮವು, ಬ್ರಾಹ್ಮಣರಿಗೆ ಮೋಕ್ಷವು, ಬ್ರಾಹಣರಿಗೆ ಪೀತವರ್ಣವು, ಕ್ಷತ್ರಿಯರಿಗೆ ಅರುಣವರ್ಣವು, ವೈಶ್ಯರಿಗೆ ಶ್ಯಾಮವರ್ಣವು, ಶೂದ್ರರಿಗೆ ನೀಲವರ್ಣವು. ಬ್ರಾಹ್ಮಣರಿಗೆ ಸಾಮವು, ಕ್ಷತ್ರಿಯರಿಗೆ ಭೇದವು, ವೈಶ್ಯರಿಗೆ ದಾನವು, ಶೂದ್ರರಿಗೆ ದಂಡವು, ಬ್ರಾಹ್ಮಣರಿಗೆ ಇಂದ್ರನಧಿದೇವತೆಯು, ಕ್ಷತ್ರಿಯರಿಗೆ ಕಾಲನಧಿದೇವತೆಯು, ಶೂದ್ರರು ಭಕ್ತರನ್ನೂ, ವೈಶ್ಯರು ಗುರುವನ್ನೂ, ಕ್ಷತ್ರಿಯರು ಲಿಂಗವನ್ನೂ, ಬ್ರಾಹ್ಮಣರು ಅತಿಥಿಗಳನ್ನೂ ಪೂಜಿಸಬೇಕು. ಶಿವಭಕ್ತನೇ ಬ್ರಾಹ್ಮಣನು, ವಿಷ್ಣುಭಕ್ತನೇ ಕ್ಷತ್ರಿಯನು, ನಿಜವಸ್ತುವು ಉತ್ಕೃಷ್ಟತ್ವವಂ ಹೊಂದಿದಲ್ಲಿ ಶ್ರೇಷ್ಠವಪ್ಪುದು; ಉತ್ಕೃಷ್ಟ ವಸ್ತುವು ನಿಜವಂ ಹೊಂದಿದಲ್ಲಿ ಅದೇ ಪರತತ್ವವು. ಇಂತಪ್ಪ ಜಾತಿಧರ್ಮಂಗಳನ್ನು ತನ್ನಲ್ಲಿ ತಾನೇ ತಿಳಿದು ಭಕ್ತನಾಗಿ, ಶೂದ್ರತ್ವಮಂ ಕಳೆದು ಮಾಹೇಶ್ವರನಾಗಿ, ವೈಶ್ಯತ್ವಮಂ ಕಳೆದು ಪ್ರಸಾದಿಯಾದಿ, ಕ್ಷತ್ರಿಯತ್ವಮಂ ಕಳೆದು ಪ್ರಾಣಲಿಂಗಿಯಾಗಿ, ಬ್ರಹ್ಮತ್ವಮಂ ಪಡೆದು ಅಜಾತಮಾಗಿ, ಆಕಾಶರೂಪಮಾಗಿ, ಶುದ್ಧಸ್ಫಟಿಕಸಂಕಾಶಮಪ್ಪ. ಪ್ರಸಾದಲಿಂಗದಲ್ಲಿ ಪರಿಣಾಮಿಸುತ್ತಾ. ಲಿಂಗವೇ ಪತಿ ತಾನೇ ಸತಿಯಾಗಿರ್ಪನೇ ಶರಣನು. ಈ ಸತಿಪತಿನ್ಯಾಯವಳಿದು ವರ್ಣಾತೀತನೂ ವಾಗತೀತನೂ ಆಗಿ, ತಾನುತಾನಾಗಿರ್ಪುದೇ ಐಕ್ಯವು. ಇಂತಪ್ಪ ಕೇವಲನಿರ್ವಾಣಲಿಂಗೈಕ್ಯಪದವೆನಗೆ ಸಾಧ್ಯಮಪ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.