Index   ವಚನ - 71    Search  
 
ಗೋಳಕಾಕಾರಮಾದ ಮಹಾಲಿಂಗವೇ ಬೀಜ, ಅದು ಸಕಲಪ್ರಪಂಚಗಳನ್ನು ತನ್ನೊಳಗಿಟ್ಟುಕೊಂಡು, ಸಕಲಕ್ಕೂ ತಾನೇ ಕಾರಣಮಾಗಿಹುದು. ಅಂತಪ್ಪ ಮಹಾಲಿಂಗವು ಗುರುತಂತ್ರದಿಂ ಭಕ್ತಕ್ಷೇತ್ರದಲ್ಲಿ ತಾನೊಂದೆರಡಾದಲ್ಲಿ, ಶಿವಶಕ್ತಿಸ್ವರೂಪಮಾದ ವರ್ಣಶಾಖೆಗಳು ಅಭೇದಮಾಗಂಕುರಿಸಿ, ಪರ್ಣದಿಂದ ಶಾಖೆಯು ಬಲಿದು, ಶಾಖೆಯಿಂದ ಪರ್ಣವು ಬಲಿದು, ಅಂತಪ್ಪ ಶಾಖಾರೂಪಮಾದ ಮುಖಂಗಳಿಂದೊಪ್ಪುತಿರ್ಪ ವೃಕ್ಷವೇ ರುದ್ರನು. ಪುಷ್ಪವೇ ಪೃಥ‍್ವಿ, ಫಲವೇ ಜಲ, ನನೆಯೇ ಅಗ್ನಿ, ಪರ್ಣವೇ ವಾಯು, ಆ ವೃಕ್ಷವೇ ಆಕಾಶ, ಬೀಜವೇ ಆತ್ಮ. ಅಂತಪ್ಪ ಬೀಜಕ್ಕೆ ನಿಂದಲ್ಲಿ ಫಲವರ್ಣಶಾಖೆಗಳು ವರ್ಧಿಸಿ, ಸುಖವಂ ಕೊಡುತಿರ್ಪವು. ಲಿಂಗಾರ್ಚನೆಯಂ ಮಾಡಿದಲ್ಲಿ, ಸಕಲ ದೇವತೆಗಳು ತೃಪ್ತರಾಗಿ ವರ್ಧಿಸುತಿರ್ಪರಾದ ಕಾರಣ, ವೀರಶೈವಮತದಲ್ಲಿ ಆತ್ಮಸ್ವರೂಪಮಾದ ಬೀಜ ಒಂದೆರಡಾದುದೇ ಇಷ್ಟ ಪ್ರಾಣಗಳು. ಫಲಮಧ್ಯದಲ್ಲನಂತರೂಪಮಾಗಿ ಸಕಲ ಪ್ರಪಂಚವಂ ತನ್ನೊಳಗಿಟ್ಟುಕೊಂಡು ತನ್ನನು ತಿಳಿದು ಸೃಷ್ಟಿಗೆ ತಾನೇ ಕಾರಣಮಾಗಿ, ಪರಮಾನಂದಮಹೀರುಹವು ಫಲಿಸಿ ತೃಪ್ತಿರೂಪಮಾಗಿ ಆ ಪ್ರಪಂಚಕ್ಕೆ ತಾನೇ ಕಾರಣಮಾಗಿ, ಮಿಕ್ಕವೆಲ್ಲಾ ಮಿಥ್ಯವಾಗಿ ತೋರುತ್ತಿರ್ಪುದೇ ಭಾವಲಿಂಗವು. ಅಂತಪ್ಪ ಭಾವಲಿಂಗಸಂಗದಲ್ಲಿ ನಿಸ್ಸಂಗ ನಿರ್ಭಾವಮಾದ ನಿತ್ಯಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.