ಶರೀರವೇ ಹೇಯದಮೊಟ್ಟೆ ದುರ್ಗಂಧವೇ ನೈಜ,
ಸುಗಂಧವೆಲ್ಲಾ ಆರೋಪಿತವಲ್ಲದೆ
ನಿಜವಲ್ಲವಾಗಿ ಹೇಯವೇ ನೈಜ.
ಮನಸ್ಸೇ ದುಃಖದಮೊಟ್ಟೆ,
ಆ ದುಃಖವೇ ನೈಜ, ಸುಖವೇ ಆರೋಪಿತ,
ಶರೀರದಲ್ಲಿರ್ಪ ಹೇಯವು ಪ್ರಬಲಗಳಾದ
ವ್ಯಾಧಿಪೀಡೆಗಳನನುಭವಿಸುತ್ತಿರಲು,
ಅದೇ ಜೀವನಿಗಿಹಲೋಕದಯಾತನೆಯಾಯಿತ್ತು.
ದುಃಖದಮೊಟ್ಟೆಯಾಗಿರ್ಪ ಮನಸ್ಸನ್ನು ದುರ್ಗುಣಂಗಳು ಬಂದು
ಅನುಭವಿಸುತ್ತಿರಲದೇ ಜೀವನಿಗೆ ಪರಲೋಕಮಾಯಿತ್ತು.
ಇಂತಪ್ಪ ಶರೀರದಲ್ಲಿ ಬಿಂದುವನ್ನೂ ಮನದಲ್ಲಿ ನಾದವನ್ನೂ
ಇಹಪರಕೃತ್ಯಂಗಳಿಗೆ ಸಾಧಕಭೂತಮಾಗಿ ಪರಮಾತ್ಮನಿಟ್ಟಿರ್ಪನು.
ಅಂತಪ್ಪ ಬಿಂದುವೇ ಆನಂದಸ್ವರೂಪು,
ನಾದವೇ ಜ್ಞಾನಸ್ವರೂಪು,
ಆ ಆನಂದಬಿಂದುವು ಶರೀರಕ್ಕೆ ಕಾರಣಮಾಗಿಹುದು,
ಈ ನಾದಬಿಂದುಗಳ ಉತ್ತರಮಾರ್ಗವೇ ಮನಶ್ಶರೀರಗಳಿಗೆ ಸುಖ,
ನಿಜಪ್ರಕಟವಂ ಮಾಡುತ್ತಿರ್ಪುದು.
ದಕ್ಷಿಣಮಾರ್ಗವೇ ದುಃಖ,
ಮಿಥ್ಯಾಪ್ರಕಟವಂ ಮಾಡುತ್ತಿಹುದು.
ಇವೆರಡರ ಸಂಬಂಧವಿಲ್ಲದ ವಸ್ತುವಿಗೆ
ಕೋಟಲೆಗೊಂಡು ಕುದಿವುತ್ತಿರ್ಪ
ಜೀವನ ಪರಿಯ ನೋಡಾ!
ಜೀವನಿಗೆ ನಿಜವೇ ಭಾವ.
ಆ ಭಾವದಲ್ಲಿರ್ಪುದು ಕಳಾಪದಾರ್ಥವು,
ಆ ಕಳಾಮಯವಾಗಿರ್ಪುದು ಸತ್ಯವು.
ಅಂತಪ್ಪ ಸತ್ಯವಂ ಹಿಡಿದು ಈ ಮಿಥ್ಯಾರೂಪಮಾದ
ಸ್ಥೂಲ ಸೂಕ್ಷ್ಮಂಗಳಂ ಬಿಟ್ಟಲ್ಲಿ,
ಜೀವನೇ ಪರಮನಪ್ಪನು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
Art
Manuscript
Music
Courtesy:
Transliteration
Śarīravē hēyadamoṭṭe durgandhavē naija,
sugandhavellā ārōpitavallade
nijavallavāgi hēyavē naija.
Manas'sē duḥkhadamoṭṭe,
ā duḥkhavē naija, sukhavē ārōpita,
śarīradallirpa hēyavu prabalagaḷāda
vyādhipīḍegaḷananubhavisuttiralu,
adē jīvanigihalōkadayātaneyāyittu.
Duḥkhadamoṭṭeyāgirpa manas'sannu durguṇaṅgaḷu bandu
anubhavisuttiraladē jīvanige paralōkamāyittu.
Intappa śarīradalli binduvannū manadalli nādavannū
ihaparakr̥tyaṅgaḷige sādhakabhūtamāgi paramātmaniṭṭirpanu.
Antappa binduvē ānandasvarūpu,
nādavē jñānasvarūpu,
ā ānandabinduvu śarīrakke kāraṇamāgihudu,
ī nādabindugaḷa uttaramārgavē manaśśarīragaḷige sukha,
nijaprakaṭavaṁ māḍuttirpudu.
Dakṣiṇamārgavē duḥkha,
mithyāprakaṭavaṁ māḍuttihudu.
Iveraḍara sambandhavillada vastuvige
kōṭalegoṇḍu kudivuttirpa
jīvana pariya nōḍā!
Jīvanige nijavē bhāva.
Ā bhāvadallirpudu kaḷāpadārthavu,
ā kaḷāmayavāgirpudu satyavu.
Antappa satyavaṁ hiḍidu ī mithyārūpamāda
sthūla sūkṣmaṅgaḷaṁ biṭṭalli,
jīvanē paramanappanu kāṇā
mahāghana doḍḍadēśikāryaguruprabhuve.