Index   ವಚನ - 85    Search  
 
ಆಕಾಶವಿಷಯಕ್ಕೆ ವಾಯುವೇ ಪ್ರಕಾಶಕಾರಣವು, ಆ ವಾಯುವಿಷಯಕ್ಕೆ ತೇಜಸ್ಸೇ ಪ್ರಕಾಶಕಾರಣವು, ಆ ಅಗ್ನಿ ವಿಷಯಕ್ಕೆ ಜಲವೇ ಪ್ರಕಾಶಕಾರಣವು, ಆ ಜಲವಿಷಯಕ್ಕೆ ಪೃಥ್ವಿಯೇ ಪ್ರಕಾಶಕಾರಣವು, ಆ ಪೃಥ್ವೀವಿಷಯಕ್ಕಾತ್ಮನೇ ಪ್ರಕಾಶಕಾರಣವು, ಆ ಆತ್ಮನು ಎಲ್ಲಕ್ಕೂ ಪ್ರಕಾಶಕಾರಣನೂ ಆಧಾರಭೂತನೂ ಆಗಿರ್ಪನು. ಆತನು ವಾಸನೆವಿಡಿದಲ್ಲಿ ಜೀವನಹನು, ವಾಸನೆಯಳಿದಲ್ಲಿ ಪರಮನಹನು, ಜಪಸ್ಫಟಿಕನ್ಯಾಯದಂತಾ ವಾಸನೆಯ ಫಲ ಕಾರಣ, ಆ ಫಲವೇ ಸೃಷ್ಟಿ ಸ್ಥಿತಿ ಸಂಹಾರಕಾರಣವು, ಅದೇ ಸುಖದುಃಖಾನುಭವಕಾರಣಮಾದ ಭವವೆನಿಸಿಕೊಂಬುದು, ಬೀಜದಲ್ಲಿ ವಾಸನೆಯಡಗಿಪ್ಪಂತೆ ಜೀವನಲ್ಲಿ ವಾಸನೆಯಡಗಿ, ಕಾಲಕರ್ಮದಿಂದ ಪ್ರಕಾಶಮಾಗಿರ್ಪುದು. ಅಖಂಡವಾಯೂಪಾಧಿಯಿಂದ ಅಕ್ಷರರೂಪಮಾಗಿ, ಅಕ್ಷರಂಗಳೊಳಗೆ ಕೂಡಿ, ನಾನಾರ್ಥಂಗಳನ್ನೀವುತ್ತಾ, ಶರೀರಂಗಳಳಿದರೆ ಭವಿಷ್ಯಚ್ಛರೀರಂಗಳಂ ಹೊಂದಿ, ತತ್ತದರ್ಥಕ್ರಿಯಾನುಗುಣಮಾಗಿ ಪ್ರವರ್ತಿಸುವಂತೆ, ಆತ್ಮನು ವಾಸನೆವಿಡಿದು, ಖಂಡಿತ ಜೀವರೂಪದಲ್ಲಿ ಶರೀರಬದ್ಧನಾಗಿ, ಒಂದಂ ಬಿಟ್ಟೊಂದಂ ಹಿಡಿದು, ಶರೀರೋಪಾಧಿಯಂ ಬಿಡದಿರ್ಪುದೇ ಭವವು. ಇಂತಪ್ಪ ಪ್ರಪಂಚವಾಸನೆವಿಡಿದ ಜೀವನಿಗೆ ಪ್ರಪಂಚದ ಕೂಡ ಅಲ್ಲದೆ ಮೋಕ್ಷವಿಲ್ಲ. ಸದಾಶಿವಾತ್ಮ ಪಂಚಾಕ್ಷರಮಂತ್ರವೆಲ್ಲ ಆ ಶಿವಸ್ವರೂಪಮಾಗಿ ತೋರ್ಪಂತೆ, ಲಿಂಗಾತ್ಮವಾದ ಜೀವನ ಭಾವದಲ್ಲೆಲ್ಲ ಲಿಂಗವೇ ಕಾಣುತ್ತಿರ್ಪುದು. ಮಂತ್ರದಲ್ಲಿ ಶಿವನೂ ಶಿವನಲ್ಲಿ ಮಂತ್ರವೂ ಅಡಗಿಪ್ಪಂತೆ, ಲಿಂಗದಲ್ಲಿ ಭಕ್ತನೂ, ಭಕ್ತನಲ್ಲಿ ಲಿಂಗವೂ ಅಡಗಿಪ್ಪುದು. ಅರ್ಥವಂ ತಿಳಿದಾನಂದಿಸುವಾಗಕ್ಷರವಂ ಮರೆವಂತೆ, ಲಿಂಗವಂ ತಿಳಿದಾನಂದಿಸಿ ತನ್ನಂ ಮರೆದಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.