Index   ವಚನ - 84    Search  
 
ಆತ್ಮಧರ್ಮವೇ ತಮಸ್ಸು, ಆತ್ಮನು ಜಡಮಾಗಿರ್ಪನು. ಆತ್ಮನು ತಮೋವಶನಾದಲ್ಲಿ ಪ್ರಪಂಚವು ಉತ್ಪನ್ನಮಾಗಿರ್ಪುದು. ತಮಸ್ಸು ಆತ್ಮನೂ ಪ್ರಾಣವು ಶಬ್ದವೂ ಆದಲ್ಲಿ, ನಿಜವು ಪ್ರಕಾಶಮಾಗಿ ಪ್ರಪಂಚವು ನಷ್ಟಮಾಗಿರ್ಪುದು. ಜೀವಧರ್ಮವಾಗಿರ್ದ ನಿದ್ರೆಯು ಜೀವನಂ ಬಂಧಿಸಿದಲ್ಲಿ ಅನೇಕ ಸ್ವಪ್ನಂಗಳುದಿಸಿ ಜೀವಾನುಭವಕಾರಣಮಾಗಿಹುದು. ಆ ಜೀವನಲ್ಲಿ ನಿದ್ರೆಯು ಲೀನಮಾದಲ್ಲಿ ಸ್ವಪ್ನವಳಿದು ಜಾಗ್ರದೊಳಗೆ ಬೆರೆವಂತೆ, ತಮೋಧರ್ಮವಾಗಿರ್ಪ ಪ್ರಪಂಚವು ಪರಮನಂ ಭ್ರಮಿಸುತ್ತಿರ್ಪುದು. ಹಗಲಿರುಳು ಜಾಗ್ರತ್ಸುಷುಪ್ತಿಗಳು ಹೇಗೋ ಹಾಗೆ ನಿಜಪ್ರಪಂಚಗಳು ಪರಮನ ಸಹಚರಗಳಾಗಿರ್ಪವು. ಜೀವಪರಮರಿಗೆ ಸ್ಥೂಲಸೂಕ್ಷ್ಮ ಮಾತ್ರ ಭೇದವಲ್ಲದೆ, ಕೆರೆಯ ನೀರೂ ಹರವಿಯ ನೀರೂ ಕೂಡಿದಲ್ಲಿ ಏಕವಾಗುವಂತೆ ವಸ್ತು ಒಂದೇ ಆಗಿರ್ಪುದು. ಭಿನ್ನಿಸಿದಲ್ಲಿ ನೀಚೋಚ್ಚಗಳು ಕಾಣುತಿರ್ಪವು, ಅವೇ ಸುಖದುಃಖಂಗಳು. ಅಂತಪ್ಪ ಭೇದವಂ ತೊಲಗಿಸಿ ನನ್ನನ್ನು ನಿನ್ನೊಳಗೇಕಮಾಗಿ ಕೂಡಲಿಟ್ಟು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.