Index   ವಚನ - 87    Search  
 
ಸ್ಥಾವರದಲ್ಲಿ ಜೀವನು ಜಲರೂಪದಿಂ ಪಾದವನಾಶ್ರಯಿಸಿಹನು. ಜಂಗಮದಲ್ಲಿ ವಾಯುರೂಪನಾಗಿ ಶಿರಸ್ಸನ್ನಾಶ್ರಯಿಸಿಹನು. ಶಿರಸ್ಸಿನಿಂ ಅಧೋಮುಖಕ್ಕಿಳಿದು, ಸರ್ವಾಂಗವಂ ವ್ಯಾಪಿಸಿ, ಅಧಃಫಲಪ್ರದನಾಗಿಹನು. ಜಲರೂಪಮಾದ ಜೀವನಿಗೆ ಅನಲಾದಿ ತ್ರಿಭೂತಂಗಳು ಆತ್ಮಛಾಯೆಗೆ ಮರೆಯಾಗಿರ್ಪುದರಿಂ ಜಡಭಾವದಿಂ ಸುಷುಪ್ತಿ ರೂಪಮಾಯಿತ್ತು. ವಾಯುರೂಪಮಾದ ಪ್ರಾಣನಿಗೆ ಆಕಾಶಭೂತವೊಂದೇ ಆತ್ಮಛಾಯೆಗೆ ಮರೆಯಾಗಿರ್ಪುದರಿಂ ಜ್ಞಾನಾಜ್ಞಾನಮಿಶ್ರಮಾಗಿ ಸುಖದುಃಖಕ್ಕೆ ಕಾರಣಮಾಯಿತ್ತು. ಆದುದರಿಂ ಜೀವಪ್ರಾಣವೆಂಬೆರಡು ಶಬ್ದಗಳು ಜೀವಾತ್ಮನಪ್ರಕಾಶಗಳಾಯಿತ್ತು. ಇಂತು ಜೀವನು ಪಂಚಭೂತಂಗಳ ಮಧ್ಯದಲ್ಲಿ ಬದ್ಧನಾಗಿ, ಸ್ಥಾವರದಲ್ಲಿ ಸುಷುಪ್ತಿರೂಪನಾಗಿ, ಜಂಗಮದಲ್ಲಿ ಸ್ವಪ್ನರೂಪಮಾಗಿರ್ಪನು ಆತ್ಮನು ಪಂಚಭೂತಂಗಳಂ ಮೆಟ್ಟಿ "ಅತ್ಯತಿಷ್ಠದ್ದಶಾಂಗುಲಂ'' ಎಂಬ ನಾಮದಿಂ ಪ್ರಕಾಶಿಸುತ್ತಿರ್ಪನು. ಅದೆಂತೆಂದೊಡೆ: ಅಂಗುಲಮೆಂದರೆ ಪ್ರಮಾಣವು. ಪಂಚಭೂತಗಳೈದೂ ಐದು ಪ್ರಮಾಣವುಳ್ಳದ್ದಾಯಿತ್ತು . ಈ ಪಂಚಭೂತಂಗಳಿಂದ ಎರಡರಷ್ಟು ಆಧಿಕ್ಯಮಾಗಿ, ಈ ಪಂಚಭೂತಗಳೊಳಗೆ ತಾನು ದಶಸ್ಥಾನವಾಗಿ, ಶೂನ್ಯಕಳೆಯಿಂ ಕೂಡಿ, ಷೋಡಶಕಳಾಪರಿಪೂರ್ಣನಾಗಿಹನು. ಐದು ಬಿಟ್ಟಲ್ಲಿ ಏಕಮೇವಾದ್ವಿತೀಯಂ ಬ್ರಹ್ಮವಾಗಿ ಕೂಡಿದಲ್ಲಿ ವಿರಾಡ್ರೂಪನಾಗಿ, ಅತ್ಯತಿಷ್ಠದ್ದಶಾಂಗುಲವೆನಿಸಿ, ಸಕಲನಿಷ್ಕಲತತ್ವಮೂರ್ತಿಯಾಗಿರ್ಪ ಪರಮಾತ್ಮನಿಗೂ ನನಗೂ ಮರೆಯಾಗಿರ್ಪ ಆಕಾಶರೂಪ ಮಾಯಾಛಾಯಾತಮಸ್ಸನ್ನು ಆತ್ಮಜ್ಞಾನ ತೇಜಃಪ್ರಕಾಶದಿಂ ತೊಲಗಿಸಿದಲ್ಲಿ, ನೀನೇ ನಾನಾಗಿರ್ಪೆನು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.