Index   ವಚನ - 88    Search  
 
ಜೀವನು ತನಗೆ ರುದ್ರಸ್ವರೂಪಮಾದ ಅಗ್ನಿಯು ಆದಿಯಲ್ಲಿ ಪ್ರಸನ್ನಮಾದಲ್ಲಿ ತಚ್ಛಕ್ತಿಯಿಂ ಪೃಥಿವೀ ಅಪ್ಪುಗಳಂ ಸಂಹರಿಸಿ, ಅವುಗಳಲ್ಲಿರ್ಪ ಸಾರವಸ್ತುಗಳಿಂದ ಸ್ವಸ್ಥಾನಮಾಗಿರ್ಪ ಶರೀರಮಂ ಪೋಷಿಸುತ್ತಾ, ಪ್ರಪಂಚಹೇತುವಾಗಿರ್ಪ ಸೃಷ್ಟಿ ಸ್ಥಿತಿ ಸಂಹಾರಂಗಳನೆಸಗುತ್ತಾ, ಅಹಂಕರಿಸುತ್ತಿರ್ಪುದಲ್ಲದೆ, ಆ ಮಹಾರುದ್ರನಿಂ ತನಗೆ ಬಂದಧಿಕಾರಮಂ ನೆನೆಯದೆ, ವಿಷ್ಣು ಬ್ರಹ್ಮರ ಬಲೆಗೆ ಸಿಕ್ಕಿ, ಅಪಥ್ಯಾದಿದೋಷಂಗಳನೆಸಗಿದಲ್ಲಿ, ಆ ಮಹಾರುದ್ರನ ದಯೆಯು ತಪ್ಪಿ, ಆ ದೋಷಗಳು ಧಾತುಗಳಂ ಪ್ರವೇಶಿಸಲು, ತನಗೆ ಪದಾರ್ಥಂಗಳಂ ಸಂಹರಿಸುವುದಕ್ಕೂ ಶರೀರವಂ ರಕ್ಷಿಸುವುದಕ್ಕೂ ಅಧಿಕಾರವು ತಪ್ಪಿ, ಕಾಯವಂ ಬಿಟ್ಟು ಹೊರಟು, ಆ ಮಹಾರುದ್ರನ ಆಗ್ರಹಮುಖದಲ್ಲಿ ಯಾತನೆಬಡುತ್ತಾ, ಮಾಯಾರೂಪವಾದ ಆಕಾಶದಲ್ಲಿ ತೊಳಲುತ್ತಾ, ತಾನೇ ಪಿಶಾಚರೂಪಮಾಗಿ ತೊಳಲುತ್ತಿರ್ಪನೆಂತೆಂದೊಡೆ: ಯಾವುದಕ್ಕೂ ಅಧಿಕಾರವಿಲ್ಲದ ಮನುಷ್ಯನು ತನಗೆ ಬೇಕಾದ ಸ್ವಲ್ಪ ಪದಾರ್ಥವನಾದರೂ ಒಬ್ಬರಂ ಹಿಡಿದು ಬಿಡದೆ ಕಾಡಿ ಬೇಡಿ ಆಗ್ರಹ ನಿಗ್ರಹಂಗಳಿಗೊಳಗಾಗಿ, ತನಗೊಳಗಾಗದವರಂ ಬಾಧಿಸಿ, ಅತಿಪ್ರಯಾಸದಲ್ಲಿ ಸ್ವಲ್ಪ ಪದಾರ್ಥವಂ ಕೊಂಡು, ಅನುಭವಿಸುತ್ತಿರ್ಪಂತೆ, ಈ ಜೀವನು ಪಿಶಾಚತ್ವದಲ್ಲಿ ಭಿನ್ನ ಜೀವರಂ ಗ್ರಹಿಸಿ, ಅತಿದುಃಖವನ್ನೂ ಸ್ವಲ್ಪ ಸುಖವನ್ನೂ ಅನುಭವಿಸುತ್ತಿರ್ಪನು. ಆ ಮಹಾರುದ್ರನ ಕೃಪೆಯೊದಗಿದಲ್ಲಿ, ಶರೀರಾದಿ ಸಕಲಪ್ರಪಂಚಸುಖಗಳನನುಭವಿಸಿ, ಅವೆಲ್ಲಕ್ಕೂ ತಾನೇ ಕರ್ತನೆಂದಹಂಕರಿಸುತ್ತಾ ಭವಕೋಟಲೆಗಲಸಿ, ತನ್ನ ಮಿಥ್ಯಾಹಂಕಾರಮಂ ಬಿಟ್ಟು, ಎಲ್ಲವೂ ಪರಶಿವನಲೀಲೆಯಲ್ಲದೆ ತಾನಸ್ವತಂತ್ರನೆಂಬುದಂ ಪರತತ್ವವಿಚಾರದಿಂ ತಿಳಿದಲ್ಲಿ, ತಾನು ಮಾಡಿದ ಕರ್ಮವೆಲ್ಲಾ ಸದಾಶಿವನಿಗರ್ಪಿತಮಾಯಿತ್ತು, ತಾಂ ನಿರ್ಲೇಪನಾದನು, ಸದಾಶಿವನು ತೃಪ್ತನಾದಲ್ಲಿ ಜೀವನ್ಮುಕ್ತನಾದನು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.