ಶಿವನೇ ಪುರುಷನು, ವಿಷ್ಣುವೇ ಶಕ್ತಿಯು.
ಅದೆಂತೆಂದೊಡೆ:
ಸೃಷ್ಟಿ-ಸ್ಥಿತಿನಿಮಿತ್ತಭೂತಳಾದ ಸ್ತ್ರೀಯಲ್ಲಿ
ಕಾಮವು ಉತ್ಪನ್ನಮಾದಲ್ಲಿ,
ಆ ಕಾಮೋಪಸಂಹಾರಕನೇ ಪುರುಷನು,
ಆ ಕಾಮಸಂಹಾರವೇ ದಾಂಪತ್ಯಸುಖವು,
ಅದೇ ಪ್ರಪಂಚಸೃಷ್ಟಿಯು,
ಆ ಸೃಷ್ಟಿಯೇ ಶಿವಶಕ್ತಿಸ್ವರೂಪವಾದ ಸ್ತ್ರೀಪುರುಷರು.
ಸ್ಥೂಲಕ್ಕೆ ಸ್ಥೂಲಮಾಗಿರ್ಪನೇ ಶಿವನು,
ಸೂಕ್ಷ್ಮಕ್ಕೆ ಸೂಕ್ಷ್ಮವಾಗಿರ್ಪುದೇ ಶಕ್ತಿಯು,
ಮಿಥ್ಯವೇ ಬ್ರಹ್ಮನು.
ಅದೆಂತೆಂದೊಡೆ:
ಸ್ವಕೀಯಾನುಭವಯೋಗ್ಯಮಾದುದೆಲ್ಲ ಸೂಕ್ಷ್ಮ,
ಅದೇ ರಕ್ಷಣಕರ್ತೃ,
ತತೋಧಿಕಮಾದುದೆಲ್ಲ ಸ್ಥೂಲ, ಅದೇ ಸಂಹಾರಕರ್ತೃ,
ಇಲ್ಲದುದೆಲ್ಲ ಮಿಥ್ಯಾ, ಅದೇ ಸೃಷ್ಟಿಕರ್ತೃ,
ಜಗತ್ಸೃಷ್ಟಿಕಾಲದಲ್ಲಿ ಮಹಾಶಕ್ತಿಯೊಳ್ಮಹಾಕಾಮವನ್ನು ಹುಟ್ಟಿಸಿ,
ವಿರಾಡ್ರೂಪದಲ್ಲಿ ಶಿವಶಕ್ತಿಗಳೇಕಮಾಗಿ,
ಕ್ರೀಡಿಸುತ್ತಿರ್ಪುದೇ ಸ್ಥೂಲಶರೀರವು.
ಅಂತಪ್ಪ ಶಿವಶಕ್ತಿಗಳೇ ಸ್ತ್ರೀಪುರುಷರೂಪಮಾಗಿ,
ಸೃಷ್ಟಿಸ್ಥಿತಿಸಂಹಾರಗಳೆಂಬ ಮಿಥ್ಯಾಪ್ರಭೆಯಲ್ಲಿ
ತಿರುಗುತ್ತಿರ್ಪ ಪ್ರಪಂಚವೇ ಸೂಕ್ಷ್ಮಶರೀರವು.
ಆ ಮಿಥ್ಯೆಯೇ ಪೀಠವಾಗಿ, ಆ ಶಕ್ತಿಯೇ ಪಾಣಿಬಟ್ಟಲಾಗಿ,
ಆ ಶಕ್ತಿಮಧ್ಯದಲ್ಲಿ ಪ್ರಕಾಶಿಸುತ್ತಿರ್ಪ
ಮಹಾಲಿಂಗವೇ ಕಾರಣಶರೀರವು.
ಇಂತು ಸ್ಥೂಲ ಸೂಕ್ಷ್ಮ ಕಾರಣರೂಪದಲ್ಲಿ ಕ್ರೀಡಿಸುತ್ತಿರ್ಪ
ನಿನ್ನ ಮಹಾನಟನೆಯಂ ಕಾಣದಿರುವ ಕಷ್ಟಮಲ್ಲದೆ
ನೀನು ನಾನೆಂಬ ಭೇದಮುಂಟೇ?
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
Art
Manuscript
Music
Courtesy:
Transliteration
Śivanē puruṣanu, viṣṇuvē śaktiyu.
Adentendoḍe:
Sr̥ṣṭi-sthitinimittabhūtaḷāda strīyalli
kāmavu utpannamādalli,
ā kāmōpasanhārakanē puruṣanu,
ā kāmasanhāravē dāmpatyasukhavu,
adē prapan̄casr̥ṣṭiyu,
ā sr̥ṣṭiyē śivaśaktisvarūpavāda strīpuruṣaru.
Sthūlakke sthūlamāgirpanē śivanu,
sūkṣmakke sūkṣmavāgirpudē śaktiyu,
Mithyavē brahmanu.
Adentendoḍe:
Svakīyānubhavayōgyamādudella sūkṣma,
adē rakṣaṇakartr̥,
tatōdhikamādudella sthūla, adē sanhārakartr̥,
illadudella mithyā, adē sr̥ṣṭikartr̥,
jagatsr̥ṣṭikāladalli mahāśaktiyoḷmahākāmavannu huṭṭisi,
virāḍrūpadalli śivaśaktigaḷēkamāgi,
krīḍisuttirpudē sthūlaśarīravu.
Antappa śivaśaktigaḷē strīpuruṣarūpamāgi,
sr̥ṣṭisthitisanhāragaḷemba mithyāprabheyalli
tiruguttirpa prapan̄cavē sūkṣmaśarīravu.
Ā mithyeyē pīṭhavāgi, ā śaktiyē pāṇibaṭṭalāgi,
ā śaktimadhyadalli prakāśisuttirpa
mahāliṅgavē kāraṇaśarīravu.
Intu sthūla sūkṣma kāraṇarūpadalli krīḍisuttirpa
ninna mahānaṭaneyaṁ kāṇadiruva kaṣṭamallade
nīnu nānemba bhēdamuṇṭē?
Mahāghana doḍḍadēśikāryaguruprabhuve.