Index   ವಚನ - 89    Search  
 
ಮನುಷ್ಯರಿಗೆ ಅಂತರಗ್ನಿಯು, ದೇವತೆಗಳಿಗೆ ಬಹಿರಗ್ನಿಯು. ಅದೆಂತೆಂದೊಡೆ: ಮನುಷ್ಯರು ತಮ್ಮ ಜಠರಾಗ್ನಿಗೆ ಆಹುತಿಯಂ ಕೊಟ್ಟಲ್ಲಿ, ಧಾತುವರ್ಧನವಾಗಿ ಜೀವನು ತೃಪ್ತಿಪಡುವನು. ದೇವತೆಗಳು ಬಾಹ್ಯಾಗ್ನಿಯಲ್ಲಿ ಶುಚಿಯೂ ರುಚಿಯೂ ಆಗಿರ್ಪ ಅಮೃತವನ್ನು ಆಹುತಿಯಂ ಕೊಟ್ಟಲ್ಲಿ, ಅದರಿಂದ ಬ್ರಹ್ಮಾಂಡದಲ್ಲಿ ಧಾತುವರ್ಧನಮಾಗಿ, ದೇವತಾಶ್ರೇಷ್ಠನಾದ ಪರಮಾತ್ಮನು ತೃಪ್ತಿಬಡುತ್ತಿರ್ಪನು. ದುರಾಹಾರವಾದರೂ ಅಗ್ನಿಮಾಂದ್ಯವಾದರೂ ಶರೀರದಲ್ಲಿ ವ್ಯಾಧಿಯು ಉಲ್ಬಣವಾಗುವಂತೆ, ತಮೋದ್ರವ್ಯವಾದರೂ ಅಗ್ನಿಪ್ರಕಾಶವಾಗದಿದ್ದರೂ ನ್ಯೂನಾತಿರಿಕ್ತವಾದರೂ, ಅದರಿಂದ ರಾಕ್ಷಸರು ವರ್ಧಿಸಿ ಬ್ರಹ್ಮಾಂಡವನೆ ಕೆಡಿಸುತ್ತಿಹರು. ಅಂತರಗ್ನಿಗೂ ಬಹಿರಗ್ನಿಗೂ ಸ್ವಾಹಾಮುಖದಲ್ಲಿ ಆಹುತಿಯಂ ಕೊಡಬೇಕು. ಏನು ಕಾರಣ ಸ್ವಾಹಾಮುಖದಲ್ಲಿ ಆಹುತಿಯಂ ಕೊಡಬೇಕೆಂದರೆ, ತಾನು ಸಂಹರಿಸುವುದೇ ಅಗ್ನಿಗುಣವು, ಆ ಗುಣವೇ ಆತನಿಗೆ ಶಕ್ತಿಯಾಗಿರ್ಪುದು. ಅದೆಂತೆಂದರೆ: ಸದಾಶಿವನ ಸಂಹಾರಗುಣವೇ ಆ ಶಿವನಿಗೆ ಶಕ್ತಿಯಾಗಿರ್ಪಂತೆಯೂ ವಿಷ್ಣುವಿನ ರಕ್ಷಣಗುಣವೇ ಆತನಿಗೈಶ್ವರ್ಯಶಕ್ತಿಯಾಗಿರ್ಪಂತೆಯೂ ಬ್ರಹ್ಮನ ಸೃಷ್ಟಿಗುಣವೇ ಆತನಿಗೆ ವಿವೇಕಶಕ್ತಿಯಾಗಿರ್ಪಂತೆಯೂ ಅಗ್ನಿಯ ಸ್ವಾಹಾಗುಣವೇ ಅಗ್ನಿಗೆ ಶಕ್ತಿಯಾಗಿರ್ಪುದು. ಸದಾಶಿವನ ಸಂಹಾರಶಕ್ತಿಯಂ ಸ್ಮರಿಸಿ, ಮಂತ್ರಂಗಳಿಂದುಪಶಾಂತಿಯಂ ಮಾಡುತಿರ್ಪಂತೆ, ಸಕಲದೇವತಾಸ್ವರೂಪಮಾದ ಅಗ್ನಿಯ ಗುಣವಂ ಸ್ಮರಿಸಿ ಆಹುತಿಯಂ ಕೊಡುತಿರ್ಪರು. ಇಂತಪ್ಪ ಹವಿರಾದಿ ಸಕಲ ಕರ್ಮಗಳನ್ನು ಜ್ಞಾನಮುಖದಲ್ಲಿ ತಿಳಿದು ಭಾವಜ್ಞನಾಗಾಚರಿಸಿದಲ್ಲಿ ದೇವತಾಪ್ರೀತಿಯಪ್ಪುದು. ಜ್ಞಾನವಿಲ್ಲದೆ ಮಹಾದಿವ್ಯಜ್ಞಾನಿಪುರುಷರಿಂ ಪ್ರತ್ಯಕ್ಷೋಪದೇಶವಿಲ್ಲದೆ, ಕೆಲವು ಗ್ರಂಥಂಗಳಂ ನೋಡಿ, ಮಂತ್ರಂಗಳಂ ಕಲಿತು, ಆ ಪ್ರಕಾರಮಾಡಿದಲ್ಲಿ ಘೋರನರಕವನನುಭವಿಸುವರು. ಅಂತಪ್ಪ ಜ್ಞಾನಯುಕ್ತವಾದ ಕರ್ಮವಂ ನನಗುಪದೇಶಿಸಿ ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.