Index   ವಚನ - 103    Search  
 
ಸತ್ತೇ ಬಿಂದುರೂಪಮಾದ ಶರೀರವು, ಚಿತ್ತೇ ನಾದರೂಪಮಾದ ಪ್ರಾಣವು, ಆನಂದವೇ ಕಳಾರೂಪಮಾದ ಮನಸ್ಸು, ನಾದರೂಪಮಾದ ಚಿತ್ತಿಗೆ ಸತ್ತೇ ಶಕ್ತಿಯು, ಬಿಂದುರೂಪಮಾದ ಶಕ್ತಿಗೆ ಆನಂದವೇ ಶಕ್ತಿಯು, ಕಳಾರೂಪಮಾದ ಆನಂದಕ್ಕೆ ಜ್ಞಾನವೇ ಶಕ್ತಿಯು, ಆನಂದಮಿಲ್ಲದ ಶರೀರವು ವ್ಯರ್ಥವು, ಜ್ಞಾನಮಿಲ್ಲದ ಮನಸ್ಸು ವ್ಯರ್ಥವು. ಈ ಶರೀರಕ್ಕೆ ಬಿಂದುಮೂಲ, ಆ ಜೀವನಿಗೆ ನಾದವೇ ಮೂಲ, ಮನಸ್ಸಿಗೆ ಕಳೆಯೇ ಮೂಲ. ಬಿಂದುರೂಪಮಾದುದೇ ಸ್ಥೂಲಶರೀರವು, ನಾದರೂಪಮಾದುದೇ ಸೂಕ್ಷ್ಮಶರೀರವು, ಕಳಾರೂಪಮಾದುದೇ ಕಾರಣಶರೀರವು. ಆನಂದಭಕ್ತಿಸಂಗದಿಂ ಬಿಂದುವರ್ತಿಸಿ ಕ್ರಿಯಾಶಕ್ತಿಸಂಗದಿಂ ಭಿನ್ನರೂಪಮಾದ ಸ್ವಸ್ತ್ರೀಗರ್ಭದಲ್ಲಿ ಬಿದ್ದಲ್ಲಿ, ಆ ಬಿಂದುವನವಗ್ರಹಸಿ, ಆ ಸ್ತ್ರೀರೇತಸ್ಸೇ ಘನೀಭವಿಸಿ ಪಿಂಡರೂಪಮಾಗಿ, ಅನೇಕ ಯಾತನೆಬಿಟ್ಟು, ಪೃಥ್ವಿಯಲ್ಲಿ ಸ್ಥೂಲರೂಪಮಾಗಿ ಜನಿಸುತ್ತಿಹುದು. ಆನಂದವು ಕ್ರಿಯಾರೂಪಮಾದಂತೆ, ಸತ್ತೇ ಮಂತ್ರರೂಪಮಾಗಿಹುದು. ಆ ಸತ್ತೇ ತ್ವಕ್ಕಿನ ಸಂಗದಿಂ ಚಿದ್ರೂಪಮಾದ ನಾದವನನುವರ್ತಿಸಿ ಸ್ವಶರೀರದಲ್ಲಿ ಜಿಹ್ವಾಮುಖದಲ್ಲಿ ಚಲಿಸಲು ಸ್ವಕೀಯಕರ್ಮ ಆನಂದವಂ ಗ್ರಹಿಸಿ ಘನೀಭವಿಸಿ ತನ್ನಲ್ಲಿಯೇ ಸೂಕ್ಷ್ಮಶರೀರವು ಬೆಳಗುವುದು. ಸೂಕ್ಷ್ಮಶರೀರವು ಸ್ಥೂಲಶರೀರವಂ ಬಿಟ್ಟು, ವೇದನೆಬಿಟ್ಟು ಪೋಪುದು. ಇಹಲೋಕದ ಸುಖದುಃಖಂಗಳಿಗೆ ಸ್ಥೂಲಶರೀರವು ಕಾರಣಮಾಗಿರ್ಪಂತೆ, ಪರಲೋಕದ ಸುಖದುಃಖಂಗಳಿಗೆ ಸೂಕ್ಷ್ಮಶರೀರವು ಕಾರಣಮಾಗಿರ್ಪುದು. ಬ್ರಾಹ್ಮಣಾದಿಯಾಗಿ ಚಂಡಾಲಪರ್ಯಂತವಾದ ಮನುಷ್ಯರು ಬಿಂದುರೂಪು, ಇವೆರಡಕ್ಕೂ ಜ್ಞಾನಯುಕ್ತವಾದ ಮನಸ್ಸು ಕಾರಣಮಾಗಿಹುದು. ಮನುಷ್ಯರು ನಾದಕರ್ಮದಿಂ ಬದ್ಧವಾಗಿಹರು, ದೇವತೆಗಳು ಬಿಂದುಕರ್ಮದಿಂ ಬದ್ಧವಾಗಿಹರು. ಕಾರಣ ಶರೀರದಲ್ಲಿ ನಿದ್ರೆಯೆ ಕಾರಣಮಾಗಿರ್ಪುದರಿಂ ಮನುಷ್ಯರಿಗೆ ಆಹಾರವೇ ಕಾರಣವೂ ದೇವತೆಗಳಿಗೆ ಮೈಥುನವೇ ಕಾರಣವೂ ಆಗಿಹುದು. ದೇವತೆಗಳು ಮಂತ್ರಪ್ರಸನ್ನರು, ಮನುಷ್ಯರು ತಂತ್ರಪ್ರಸನ್ನರು. ದೇವತೆಗಳಿಗೆ ಶಬ್ದದಲ್ಲಿರ್ಪ ಅರ್ಥವೇ ಜೀವನವೂ ಭೂಷಣವೂ ಆಗಿಹುದು, ಮನುಷ್ಯರಿಗೆ ಬಿಂದುವಿನಲ್ಲಿರ್ಪ ಅರ್ಥವೇ ಭೂಷಣವೂ ಜೀವನವೂ ಆಗಿಹುದು. ಬಿಂದುರೂಪಾದ ಅರ್ಥವು ಆನಂದಮಯಮಾಗಿರ್ಪುದು, ಶಬ್ದದಲ್ಲಿರ್ಪ ಅರ್ಥವು ಸತ್ಯರೂಪಮಾಗಿಹುದು, ಕಳೆಯಲ್ಲಿರ್ಪ ಅರ್ಥವು ಜ್ಞಾನಸ್ವರೂಪಮಾಗಿಹುದು. ಸತ್ಯಮುಳ್ಳ ಪುರುಷನು ದೇವತಾಶ್ರೇಷ್ಠನು, ಜ್ಞಾನಮುಳ್ಳ ಪುರುಷನೇ ಪ್ರಮಥಶ್ರೇಷ್ಠನು, ಜ್ಞಾನಾನಂದಸಂಗದಿಂ ಕಾರಣಕಳಾರೂಪಮಾದ ಮನಸ್ಸು ಲಯಮಾದಲ್ಲಿ; ಸ್ಥೂಲ ಸೂಕ್ಷ್ಮ ಸಂಬಂಧಗಳಳಿದು, ಸದಾನಂದವೇ ಸ್ಥೂಲವಾಗಿ, ಸಚ್ಚಿತ್ಪ್ರಕಾಶವೇ ಸೂಕ್ಷ್ಮವಾಗಿ, ಜ್ಞಾನಾನಂದವೇ ಕಾರಣಮಾಗಿ, ಶರೀರ ಜೀವ ಮನಸ್ಸೆಂಬ ಮಿಥ್ಯಾಭ್ರಮೆಯು ನಷ್ಟಮಾಗಿ, ಸತ್ಯಜ್ಞಾನಾನಂದರೂಪವೇ ಮಹಾಲಿಂಗವಾಗಿ, ಇಂತಪ್ಪ ಮಹಾಲಿಂಗದಲ್ಲಿ ತಾನೆಂಬ ಮಿಥ್ಯಾಭ್ರಮೆಯಳಿದಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.