ಕೇವಲ ವಿವಿಚ್ಚ ಜ್ಞಾನವೇ ಶಿವನು.
ಆ ಶಿವನೆ ಪ್ರಪಂಚ ಸಂಹಾರಮೂರ್ತಿ.
ಆ ಶಿವನು ಪ್ರಪಂಚವ ಸಂಹರಿಸಿದಲ್ಲಿ
ಶೇಷ ವಸ್ತು ತದ್ಭಾವವೇ ಘಟವಳಿದಲ್ಲಿ
ಘಟಭಾವವುಳಿದಂತೆ ಮೊದಲಿಂದಲೂ
ಸಂಹಾರ ಮುಖದಲ್ಲಿ ಅಳಿಯದೆ ಉಳಿದಿಪ್ಪುದರಿಂ
ಆ ಭಾವವೆ ಆದಿಶೇಷಮಾಯಿತ್ತು.
ಆ ವಿವೇಕಕ್ಕೆ ಆ ಭಾವವೆ ಅಲಂಕಾರಮಾದುದರಿಂ
ಶಿವನಿಗೆ ಅದೆ ಆಭರಣಮಾಯಿತ್ತು
ಸಕಲಸಂಹಾರ ಪ್ರಪಂಚಕ್ಕೂ
ಆ ಭಾವ ತಾನೆ ಆಧಾರಮಾಯಿತ್ತು.
ಅದು ವಿಷ್ಣುವಿಗೆ ಶಯ್ಯಮಾಗಿರ್ಪುದೆಂತೆಂದಡೆ:
ವಿಷ್ಣುವೆಂದರೆ ವ್ಯಾಪಿಸಲ್ಪಟ್ಟಂಥ ಸ್ವಕರ್ಮ.
ಅದಕ್ಕೆ ಪ್ರಕೃತಿಯೆಂಬ ನಾಮ-
ಉತ್ಕೃಷ್ಟಮಾಗಿ ಮಾಡಲ್ಪಟ್ಟುದುಯೆಂಬುದರ್ಥ.
ಅದು ಪ್ರಪಂಚ ರಕ್ಷಣ ಕಾರಣಮಾಗಿರ್ಪುದರಿಂ
ಪ್ರಪಂಚಮೂಲವೆ ಪ್ರಕೃತಿ, ಪ್ರಪಂಚಲಯಮಾದಲ್ಲಿ
ಪ್ರಪಂಚ ಕರ್ಮದಲ್ಲಿ ಭಾವದಲ್ಲಿ ಸುಷುಪ್ತಿಯ ಹೊಂದಿರ್ಪುದರಿಂ
ಆ ಶೇಷನಲ್ಲಿ ವಿಷ್ಣು ಶಯನಮಾಗಿರ್ಪುದರಿಂ
ಸಾಕಾರದಲ್ಲಿ ಕರ್ಮ, ನಿರಾಕಾರದಲ್ಲಿ ಭಾವ,
ಎರಡಕ್ಕೂ ಭೇದಮಿಲ್ಲದೆ ವಿಷ್ಣುವ್ಯಾಪಕತ್ವವೂ
ಶೀಲಸ್ವಭಾವವೂ ಏಕಮಾಗಿರ್ಪುದು.
ಭಾವಮುಖದಲ್ಲಿ ಪ್ರಕೃತಿಯುಕ್ತಮಾದ
ಸಕಲ ವಿಷಯಂಗಳು ವ್ಯಾಪಿಸಿರ್ಪುದರಿಂ
ಶೇಷಮುಖವೇ ವಿಷಾನ್ವಿತವಾಯಿತ್ತು.
ಶೇಷ ಕ್ಷಣವೆ ಭಾವ; ಭಾವ ವ್ಯವಹಾರ ಅವ್ಯವಹಾರದಲ್ಲಿ
ಪ್ರಕಾಶಿಸುತ್ತಿರ್ದ ಜ್ಞಾನವೇ ಶಿರೋರತ್ನ.
ಅದು ಅಚೇತನವಚೇತನ ಮಾಡುತಿರ್ಪುದು.
ಆ ಈಶ್ವರ ಭಾವದಲ್ಲಿ ಪರವಶಮಾಗಿರ್ಪ ಪ್ರಕೃತಿ
ತದ್ವಿಚಾರ ಜ್ಞಾನದಿ ಚೇತನಮಾಗಿ
ಕರ್ಮ ರೂಪದಲ್ಲಿ ಪ್ರಪಂಚಮುಖದಲ್ಲಿ
ಪ್ರವಹಿಸುವಲ್ಲಿ ಕಾಲೋಚಿತ ಕರ್ಮ, ಭಿನ್ನ ಕರ್ಮ,
ಉತ್ಕೃಷ್ಟ ಕರ್ಮ ಈ ಮೂರರ್ಥಮುಳ್ಳುದೆ ಪ್ರಕೃತಿ.
ಅದು ಸೃಷ್ಟಿ ಸ್ಥಿತಿ ಸಂಹಾರರೂಪಮಾಗಿರ್ಪುದು.
ಅದರಿಂ ವಿವೇಕವೇ ಶಿವನು, ಪ್ರಕೃತಿಯೇ ವಿಷ್ಣು,
ಅದರಿಂ ಪ್ರಕೃತಿಯೇ ಕರ್ಮ, ವಿವೇಕವೇ ಜ್ಞಾನ,
ಆ ಕರ್ಮಮುಖದಲ್ಲಿ ಹುಟ್ಟುತ್ತಿರ್ಪ ಕಾರ್ಯವೇ ಬ್ರಹ್ಮನು.
ಅದು ಸಾಮ, ದಾನ, ಭೇದ ದಂಡಂಗಳೆಂಬ
ಚತುರ್ಮುಖಗಳಿಂದೊಪ್ಪುತಿಹುದು.
ಆ ಕಾರ್ಯಮುಖದಲ್ಲಿ ಹುಟ್ಟುತ್ತಿರ್ಪ
ಪ್ರಪಂಚವೇ ವಿಶ್ವಪ್ರಪಂಚ.
ಆ ಕಾರ್ಯಕ್ಕೆ ವಿವೇಕವೇ ಶಕ್ತಿಯಾಗಿಹುದು.
ಅದು ವಿವೇಕಕ್ಕೆ ಪ್ರಕೃತಿಯೆ ಶಕ್ತಿಯಾಗಿಹುದು.
ಆ ಪ್ರಕೃತಿಗೆ ಕಾರ್ಯವೇ ಶಕ್ತಿಯಾಗಿಹುದು.
ಆ ಕಾರ್ಯ ಪ್ರಪಂಚವ ಸೃಷ್ಟಿಸುತ್ತಿಹುದು,
ಆ ಕರ್ಮ ಪ್ರಪಂಚವ ರಕ್ಷಿಸುತ್ತಿಹುದು.
ವಿವೇಕ ಇದೆಲ್ಲವನ್ನು ಭಾವದಲ್ಲಿ
ಉಪಸಂಹಾರವ ಮಾಡಿದಲ್ಲಿ
ಕಾರ್ಯಕ್ಕೆ ಮೃತಿ, ಕರ್ಮಕ್ಕೆ ಮೂರ್ಛೆ,
ಜ್ಞಾನ ಒಂದೇ ಚೇತನಮಾಗಿಹುದು.
ಅಂತಪ್ಪ ಆದಿ ಭಾವವೇ ಶೇಷನು.
ಅದಕ್ಕೆ ಗರುಡನು ಪಗೆಯಾಗಿರ್ಪುದೆಂತೆಂದಡೆ:
ಗಾರುಡ ಮೂಲವೆ ಗರುಡನು;
ಗಾರುಡವೆಂದರೆ ಪ್ರಪಂಚ.
ತನ್ಮೂಲವಾಗಿರ್ಪ ಮಿಥ್ಯವೇ ಗರುಡನು.
ಅದು ಪ್ರಕೃತಿಗೆ ಆಧಾರಮಾಗಿ
ವಿವೇಕ ಭಾವ ಸಂಹರಿಸುತ್ತಿಹುದು.
ಪ್ರಕೃತಿಯುಕ್ತಭಾವ ಸಂಹರಿಸಲಾರದು.
ಈ ಪ್ರಕೃತಿಯುಕ್ತದಲ್ಲಿ ಭಾವವನಂತವಾಗಿ
ಸಕಲ ಪ್ರಪಂಚವನ್ನು ಬಳಸಿರ್ಪುದರಿಂ
ಕುಂಡಲಿಯಾಯಿತ್ತು.
ಅದು ವಿವೇಕ ಮುಖದಲ್ಲಿ ಒಂದೆಯಾಗಿ
ಜ್ಞಾನಲಿಂಗಕ್ಕೆ ಭಾವವೆ ಆಭರಣಮಾಗಿ
ಆನಂದ ಕಳೆಯೆ ನಿಜಮಾಗಿರ್ಪುದೆ ಮೋಕ್ಷ.
ಅಂತಪ್ಪ ಕೈವಲ್ಯ ಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯ ಪ್ರಭುವೆ.