ಜಾಗ್ರ ಶರೀರದಲ್ಲಿ ರಜಸ್ಸು
ಭಾವಸ್ವಪ್ನದಲ್ಲಿ ತಮಸ್ಸು
ಸೂಕ್ಷ್ಮ ಸುಷುಪ್ತಿಯಲ್ಲಿ ಸತ್ವಹೊಂದಿ
ತ್ರಿಮೂರ್ತಿ ಭೇದದೊಲಿರ್ಪುದು.
ಆ ಸುಷುಪ್ತಿಯ ಮಹಿಮೆಯಿಂ
ಆ ಸಾಕಾರ ನಿರಾಕಾರವಲ್ಲದೆ, ದ್ವೈತಾದ್ವೈತವಲ್ಲದೆ,
ಭೂತ ಭವಿಷ್ಯತ್ತಲ್ಲದೆ,
ಜನನ ಮರಣಮಲ್ಲದೆ ವಿಶಿಷ್ಟರೂಪಮಾಗಿ,
ಕೇವಲ ಪ್ರತ್ಯಕ್ಷಮಾಗಿ, ಅಖಂಡಮಯಮಾಗಿರ್ಪ ವಸ್ತುವ
ತತ್ಪ್ರಕೃತಿರೂಪಮಾದ ತಮಸ್ಸು ಮಧ್ಯ ಜನಿಸಿ,
ಭಿನ್ನಿಸಿದಲ್ಲಿ, ದ್ವೈತಾದ್ವೈತ ಸಾಕಾರ ನಿರಾಕಾರಂಗಳೆಂಬ
ಭೇದಂಗಳುದಿಸಿ, ತನ್ಮಧ್ಯ ಆ ಬೀಜ ಮಧ್ಯದಲ್ಲಿ
ಪಲ್ಲವಿಸಿದ ವೃಕ್ಷದಂತೆ, ತಮಸ್ಸು ಪಲ್ಲವಿಸಿದಲ್ಲಿ
ಆ ತಾಮಸಾಗ್ರದಲ್ಲಿ ಅಖಂಡರೂಪಮಾಗಿ
ಅನಂತ ರೂಪಿನಲ್ಲಿ ಫಲಮಧ್ಯದಲ್ಲಿ ಕ್ರೀಡಿಸಿ
ಆ ವೃಕ್ಷವಳಿದು ನಿಂತ ಬೀಜವೇ ಅನ್ನ,
ಅನ್ನವೇ ಪ್ರಾಣರೂಪಮಾಗಿ
`ಅನ್ನಂ ಚ ಬ್ರಹ್ಮ ಅಹಂ ಚ ಬ್ರಹ್ಮ'ವೆಂಬ ಶ್ರುತಿವಚನದಿಂ
ಅಖಂಡಮಯಮಾದ ವಿಶಿಷ್ಟ ಶಿವನೆ ಮಹಾಲಿಂಗ.
ಅಂತಪ್ಪ ಲಿಂಗೈಕ್ಯ ಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯ ಪ್ರಭುವೆ.