Index   ವಚನ - 7    Search  
 
ಅಲ್ಲಿಂದ ಲಿಂಗಾಂಗಸಂಬಂಧದ ಆಚರಣೆಗಳರಿವಿಂ ಕಟಿಸ್ಥಾನ, ಮಂಡೆಯ ಸ್ಥಾನಗಳಲ್ಲಿ ತ್ರಿವಿಧ ಲಿಂಗಧ್ಯಾನದಿಂದೆ ಸರ್ವಾಂಗಸ್ನಾನಂಗೆಯ್ದು, ಪ್ರಕ್ಷಾಲನಂ ಮಾಡಿ, ಪರಿಣಾಮೋದಕದಲ್ಲಿ ತೊಳೆದಂಥ ಕೌಪ ಮೊದಲಾದ ಮಡಿಗಳನ್ನು ಪಾದೋದಕ ಲಿಂಗಸ್ಪರಿಶನಗಳಿಂದ ಧಾರಣಂಗೈದು, ಪರಿಣಾಮವಾದ ದಿಕ್ಕುಗಳಲ್ಲಿ ನಾರು ರೋಮ ಹುಲ್ಲು ಅರಳೆ ಮೊದಲಾದ್ದರಲ್ಲಿ ಹುಟ್ಟಿದಂಥಾದ್ದಾವುದಾದರೂ ಪರಿಣಾಮವಾದ ಶಾಟಿಯ ಆಸನವ ರಚಿಸಿ, ಜಂಗಮವು ತಾವು ಸಮರಸಭಾವದಿಂದೆ ಉಪಚಾರಗಳೊದಗಿದಂತೆ ನೆರವಿಕೊಂಡು, ಕರಸ್ಥಲದಲ್ಲಿ ಮೂಲಪ್ರಣಮವನರ್ಚಿಸಿ, ಕ್ರಿಯಾಭಸಿತವನ್ನು ಕರಸ್ಥಲದಲ್ಲಿ ಇಟ್ಟುಕೊಂಡು, ಅನಾದಿ ಚಿದ್ಭಸಿತವ ಧ್ಯಾನಿಸಿ, ಮೂಲಷಡಕ್ಷರವ ಲಿಖಿತಂಗೈದು, ಅರ್ಚಿಸಿ, ಪೂಜೆಯನಿಳುಹಿ, ಸಮಸ್ತಕಾರಣಕ್ಕೆ ಇದೆ ಚೈತನ್ಯವೆಂದು ಭಾವಭರಿತವಾಗಿ, ಗುರುಪಾದೋದಕದಿಂದ ತೊಳೆದು, ಲಿಂಗಪಾದೋದಕಪ್ರಣಮಸಂಬಂಧ ಭಸ್ಮದಿಂದ ಪವಿತ್ರವಾದ ದ್ರವ್ಯಗಳೆ ಶುದ್ಧಪ್ರಸಾದವೆಂದು ಭಾವಿಸಿ, ಲಿಂಗಜಂಗಮಾರಾಧನೆಯ ಮಾಡುವುದೊಳಗೆ ಕ್ರಿಯಾಶಕ್ತಿಯರು ಶುದ್ಧೋದಕದಿಂದ ಪವಿತ್ರಕಾಯರಾಗಿ, ಲಿಂಗಬಾಹ್ಯರ ಸ್ಪರ್ಶನವನುಳಿದು, ಸುಯಿಧಾನದಿಂದ, ಉದಕವೆ ಮೊದಲು ಧಾನ್ಯ ಕಾಯಿಪಲ್ಯ ಕ್ಷೀರವೆ ಕಡೆಯಾದ ಸಮಸ್ತ ದ್ರವ್ಯಂಗಳು ಶುಚಿಯಾಗಿ ಲಿಂಗಜಂಗಮಾರಾಧಕರೆ ನಿರವಯಪ್ರಭು ಮಹಾಂತಗಣಂಗಳೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.