Index   ವಚನ - 18    Search  
 
ನಿಃಕಳಂಕ ಶ್ರೀಗುರುವಿನ ಚಿದ್ಗರ್ಭೋದಯ ವೇಧಾಮಂತ್ರಕ್ರಿಯಾದೀಕ್ಷಾನ್ವಿತ ವೀರಶೈವ ಭಕ್ತಮಹೇಶ್ವರರು ಪ್ರಮಾದವಶದಿಂದ ವಿಘ್ನಾದಿಗಳ ಅಚೇತನದ ವೇಳೆ ಬಂದೊದಗಿ ಕ್ರಿಯಾಲಿಂಗಾರ್ಪಣ ತಡೆದು ನಿಂದಲ್ಲಿ ಮತ್ತೊಮ್ಮೆ ಒದಗಿದಾಗ್ಗೆ, ನಿನ್ನೆ ನಿಂತ ಕ್ರಿಯೆಗಳೆಂದು ಎರಡು ಮೂರು ಜಪಗಳ ಮಾಡಿ, ಎರಡು ಮೂರು ವೇಳೆ ತೀರ್ಥಪ್ರಸಾದಗಳೆಂದು, ಭಿನ್ನಕ್ರಿಯಾರ್ಪಣಗಳ ಮಾಡಲಾಗದು ಶಿವಪ್ರಸಾದಿಗಳು. ಸಾಕ್ಷಿ: ದಿವಾ ನ ಪೂಜಯೇಲ್ಲಿಂಗಂ ರಾತ್ರೌ ಚೈವ ನ ಪೂಜಯೇತ್ | ಸದಾ ಸಂಪೂಜಯೇಲ್ಲಿಂಗಂ ದಿವಾರಾತ್ರಿ ನಿರೋಧತಃ ||'' ಎಂಬ ಹರನಿರೂಪಪ್ರಮಾಣವಾಗಿ ಮಾರ್ಗಕ್ರಿಯಾಚರಣೆ ಇಷ್ಟಲಿಂಗಾರೋಪಿತವಾಗಿ, ಮೀರಿದಕ್ರಿಯಾಚರಣೆಯೇ ಪ್ರಾಣಲಿಂಗಾರೋಪಿತವಾಗಿ, ಸದಾಸನ್ನಿಹಿತ ಪರಿಪೂರ್ಣಕ್ರಿಯಾಚರಣೆಯೆ ಭಾವಲಿಂಗಾರೋಪಿತವಾಗಿ, ತ್ರಿವಿಧ ತನುಮನದ ವಸ್ತುಗಳೆಲ್ಲ ಲಿಂಗಾಂಗಸಂಗಸಂಯೋಗವಾದ ನಿಜಲಿಂಗೈಕ್ಯಂಗೆ ದಿವರಾತ್ರಿಗಳ ತೊಡಕೇತಕೆಂದಾತ ನಿರವಯಪ್ರಭು ಮಹಾಂತ ತಾನೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.