Index   ವಚನ - 19    Search  
 
ಅಯ್ಯಾ, ತನತನಗೆ ಚೈತನ್ಯವಿರ್ದು, ಉಪಚಾರಗಳನುಗುಣದಿಂದೊದಗಿದಲ್ಲಿ, ದಿನದಾರ್ಚನೆ ಇಷ್ಟಲಿಂಗಾರೋಪಿತವೆಂದು, ಭಿನ್ನಭಾವಗಳಿಲ್ಲದೆ ಕ್ರಿಯಾರ್ಚನೆ ನಿಂತಲ್ಲಿ ತನ್ನ ನಿಜನೈಷ್ಠೆಯೆ ಲಿಂಗಮಂತ್ರದಲ್ಲಚ್ಚೊತ್ತಿ, ರೂಪಾದ ಭೋಗವೆಲ್ಲ ತೃಣವೆಂದು ತಿರಸ್ಕರಿಸಿರುವುಳ್ಳಂಥವರಾಗಿ, ತನ್ನ ಸುಚಿತ್ತವೆ ಸ್ನಾನಾಭಿಷೇಕವಾಗಿ, ಸುಬುದ್ಧಿಯೆ ಸುಗಂಧಪರಿಮಳವೆನಿಸಿ, ನಿರಹಂಕಾರವೆ ಅಕ್ಷತವಾಗಿ, ಸುಮನಾದಿ ಪದ್ಮಗಳೆ ಪುಷ್ಪಪತ್ರವೆನಿಸಿ, ಸುಜ್ಞಾನವೆ ಧೂಪವಾಗಿ, ಸದ್ಭಾವವೆ ದೀಪಾರತಿಯೆನಿಸಿ, ಸನ್ಮಾನವೆ ನೈವೇದ್ಯವಾಗಿ, ಸಂಪೂರ್ಣವೆ ತಾಂಬೂಲಗೈದು, ನಿಶ್ಚಿಂತನಿರವಯನಿರಾಲಂಬನಿರ್ಗುಣಾನಂದವೆ ಷೋಡಶೋಪಚಾರವಾಗಿ ಪರಾತ್ಪರ ಜ್ಯೋತಿರ್ಮಯಪ್ರಮಾಣಲಿಂಗದಲ್ಲಿ ಎರಡಳಿದುಳಿದು ಲಿಂಗವೆ ಪೂಜ್ಯಪೂಜಕನೆಂದರಿದು, ಬಚ್ಚಬರಿಯಾನಂದದ ಪರಿಪೂರ್ಣಬ್ರಹ್ಮವಾಗಿ ನಿಂದ ನಿರ್ಧಕರೆ ನಿರವಯಪ್ರಭು ಮಹಾಂತರು ಮತ್ತಾರುಂಟು ಹೇಳಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ?