ಪರಮಾನುಭಾವಜಂಗಮಾರಾಧನೆಗೆಂದು
ಒಂದೆ ಪಶ್ಚಿಮಾದ್ರಿ ಏಕದಳಪದ್ಮವ ಸಮರ್ಪಿಸಿ,
ಬಚ್ಚಬರಿಯಾನಂದಾಬ್ಧಿಯಲ್ಲಿ ಲೋಲುಪ್ತರಾಗಿರ್ಪರು
ಸದ್‍ಭಕ್ತ ಶರಣಗಣಾರಾಧ್ಯರು.
ಈ ಪೂಜಾಸ್ಥಾನದಲ್ಲಿ ಅಷ್ಟವಿಧಾರ್ಚನೆ
ಷೋಡಶೋಪಚಾರಗಳಿಲ್ಲವು.
ಅದೇನು ಕಾರಣವೆಂದಡೆ:
ಸಗುಣ-ನಿರ್ಗುಣ, ಸಾಕಾರ-ನಿರಾಕಾರ,
ಆದಿಲಿಂಗ ಅನಾದಿಶರಣಸಂಬಂಧವಿಡಿದು,
ಸರ್ವೋಪಚಾರಪೂಜೆಗಳೆರಡು ನಿತ್ಯವಾದ
ಅಂತರಂಗದ ಪರಿಪೂರ್ಣದ್ರವ್ಯ ನಿರಂಜನಪೂಜೆಯೆಂದು
ಇಲ್ಲಿಗೆ ಸದ್ರೂಪವಾದ ಗುರು, ಚಿದ್ರೂಪವಾದ ಲಿಂಗ,
ಚಿನ್ಮಯರೂಪವಾದ ಜಂಗಮಾರ್ಚನೆ.
ಈ ಮೂರು ಸಂಬಂಧಾಚರಣೆಯಾಗಿರ್ಪುವು.
ಈ ನಿಲುಕಡೆಯ ಮೀರಿ ಶೈವಭಿನ್ನಕರ್ಮಿಗಳಂತೆ
ತೀರ್ಥದಲ್ಲಿ ಪೂಜೆಯೊಂದ ಮಾಡಲಾಗದು.
ಅದೇನುಕಾರಣವೆಂದಡೆ:
ಶರಣನ ಸದ್ರೂಪವಾದ ಚಿತ್ಕಾಯದಲ್ಲಿ ಸಂಬಂಧವಾದ
ನಿಜೇಷ್ಠಲಿಂಗ ವೃತ್ತಗೋಳಕಮುಖಂಗಳಲ್ಲಿ
ದೀಕ್ಷಾಗುರು ಮೋಕ್ಷಾಗುರು ಶಿಕ್ಷಾಗುರುಸ್ಥಲವಾದ
ಸಾಕಾರಗುರುಲಿಂಗಜಂಗಮವಾಗಿ ನೆಲಸಿರ್ಪುದುದರಿಂದ
ಆ ಇಷ್ಟಲಿಂಗಸೂತ್ರವಿಡಿದು,
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದೆ
ಸಗುಣಾರ್ಚನೆಯೊಳಗಿನ ಕ್ರಿಯಾರ್ಚನೆಯು.
ಇದೀಗ ಅನಾದಿಪ್ರಮಥಗಣ ಸುಕರಾರ್ಚನೆ ಸೂತ್ರವು.
ಶರಣನ ಚಿದ್ರೂಪವಾದ ಚಿತ್‍ಪ್ರಾಣದಲ್ಲಿ ಸಂಬಂಧವಾದ ಚಿತ್ಪ್ರಾಣಲಿಂಗ
ತಾರಕಾಕೃತಿ, ದಂಡಕಾಕೃತಿ, ಕುಂಡಲಾಕೃತಿ,
ಅರ್ಧಚಂದ್ರಾಕೃತಿ, ದರ್ಪಣಾಕೃತಿ, ಜ್ಯೋತಿರಾಕೃತಿಗಳಲ್ಲಿ
ಕಾಯಾನುಗ್ರಹ ಪ್ರಾಣಾನುಗ್ರಹ ಇಂದ್ರಿಯಾನುಗ್ರಹಸ್ಥಲವಾದ
ನಿರಾಕಾರ ಚಿದ್ವಿಭೂತಿ ರುದ್ರಾಕ್ಷಿ ಮಂತ್ರವಾಗಿ ನೆಲಸಿರ್ಪುದುದರಿಂದ
ಆ ಪ್ರಾಣಲಿಂಗಸೂತ್ರವಿಡಿದು, ಮಂತ್ರ ಧ್ಯಾನ ಜಪಸ್ತೋತ್ರಂಗಳಿಂದ
ಸೂಕ್ಷ್ಮಾರ್ಚನೆಯ ಮಾಡುವುದೆ
ಸಗುಣಾರ್ಚನೆಯೊಳಗಿನ ಜ್ಞಾನಾರ್ಚನೆಯು.
ಇದೀಗ ಅನಾದಿಪ್ರಮಥಗಣ ನಿರಾರ್ಚನ ಸೂತ್ರವು.
ಶರಣಚಿನ್ಮಯರೂಪವಾದ ಚಿತ್ಸೂರ್ಯಚಂದ್ರಾಗ್ನಿಮಂಡಲತ್ರಯಂಗಳಲ್ಲಿ
ಪರಮಾಣುಮೂರ್ತಿ ಭಾವಲಿಂಗ ಅಖಂಡಜ್ಯೋತಿರಾಕೃತಿ
ಅಖಂಡಮಹಾಜ್ಯೋತಿರಾಕೃತಿಗಳಲ್ಲಿ ಅಖಂಡಮಹಾಚಿಜ್ಜ್ಯೋತಿರಾಕೃತಿಗಳಲ್ಲಿ
ಕಾಯಾರ್ಪಣ ಕರಣಾರ್ಪಣ ಭಾವಾರ್ಪಣ ಪರಿಣಾಮಾರ್ಪಣಸ್ಥಲವಾದ
ನಿರವಯಚಿತ್ಪಾದೋದಕ ಚಿತ್ಪ್ರಸಾದವಾಗಿ ನೆಲಸಿರ್ಪುವುದರಿಂದ
ಆ ಭಾವಲಿಂಗಸೂತ್ರವಿಡಿದು ಮನೋರ್ಲಯ ನಿರಂಜನವಾದ ಘನಮನದಿಂದ
ಕರಣಾರ್ಚನೆಯ ಮಾಡುವುದೆ
ಸಗುಣಾರ್ಚನೆಯೊಳಗಿನ ಮಹಾಜ್ಞಾನಿಯು.
ಇದೀಗ ಅನಾದಿಪ್ರಮಥಗಣ ನಿರವಯಾರ್ಚನೆಯ ಸೂತ್ರವು.
ಈ ನಿಲುಕಡೆಗಳಿಂದ ಪ್ರಮಥಗಣ ಹೋದ ಮಾರ್ಗವ ತಿಳಿದು,
ಸಾಕಾರವಾದ ಕಾಯವಿಡಿದು ಬಂದ
ರೂಪಾದ ಅಷ್ಟವಿರ್ಧಾಚನೆ ಷೋಡಶೋಪಚಾರವ
ಗುರುಲಿಂಗಜಂಗಮಕ್ಕೆ ಮಾಡುವುದೇ ಕಾಯಾರ್ಚನೆಯೆನಿಸುವುದು.
ನಿರಾಕಾರವಾದ ಕರಣವಿಡಿದು ಬಂದ ಚಿದ್ರೂಪವಾದ
ಮಂತ್ರ ಧ್ಯಾನ ಜಪಸ್ತೋತ್ರಂಗಳ
ಚಿದ್ವಿಭೂತಿ ರುದ್ರಾಕ್ಷಿ ಮಂತ್ರಕ್ಕೆ ಮಾಡುವುದೆ ಕರಣಾರ್ಚನೆಯೆನಿಸುವುದು.
ನಿರವಯವಾದ ಭಾವವಿಡಿದು ಬಂದ ಚಿನ್ಮಯರೂಪಾದ
ಮನೋರ್ಲಯ ನಿರಂಜನ ಘನಮನೋಲ್ಲಾಸ ಚಿದ್ಬೆಳಗುಗಳ
ಚಿತ್ಪಾದತೀರ್ಥ ಪ್ರಸಾದಕ್ಕೆ ಮಾಡುವುದೆ ಭಾವಾರ್ಚನೆಯೆನಿಸುವುದು.
ಹೀಂಗೆ ಪೂರ್ವಪುರಾತನೋಕ್ತಿಯಿಂದ ಸಾಕಾರವಾದ ಕಾಯಾರ್ಚನೆಯ
ಕರಸ್ಥಲದ ಇಷ್ಟಲಿಂಗಕ್ಕೆ, ಆ ಇಷ್ಟಲಿಂಗಕ್ಕೆ ಚೈತನ್ಯವಾದ
ಚರಲಿಂಗಪಾದಕ್ಕೆ ಮಾಡುವುದು ಸಾಧ್ಯ.
ಗಣಂಗಳು ನಿರಾಕಾರವಾದ ಕರಣಾರ್ಚನೆಯ
ಚರಜಂಗಮಲಿಂಗದ ಚರಣಾಬ್ಜದ ಕೊನೆಮೊನೆಯೊಳಗೆ
ಮೂಲಮಂತ್ರಮೂರ್ತಿ ಚಿನ್ಮಂಡಲಾಧಿಪತಿ
ಪ್ರಾಣಲಿಂಗಸೂತ್ರಂಗಳೊಳ್
ಚಿತ್ಕರಣಂಗಳೊಂದುಗೂಡಿ ಪಶ್ಚಿಮಾದ್ರಿ
ಏಕಕುಸಮದೊಳು ಹುದುಗಿ
ನಿಜದೃಷ್ಟಿ ಕಡೆ ಸೂಸಲೀಯದೆ,
ನಿರಂಜನಜಂಗಮಾರ್ಚನೆಯು ಮೊದಲಾದ
ಚಿದ್ವಿಭೂತಿರುದ್ರಾಕ್ಷಿ ಮಂತ್ರಬ್ರಹ್ಮಕ್ಕೆ ಮಾಡುವುದು ಸಾಧ್ಯ.
ಗಣಂಗಳು ನಿರವಯವಾದ ಭಾವಾರ್ಚನೆಯ
ಚರಜಂಗಮ ಜಂಗಮಲಿಂಗ ಲಿಂಗಶರಣ
ಶರಣ ವಿಭೂತಿ ರುದ್ರಾಕ್ಷಿ ಮಂತ್ರ,
ಆ ಚಿದ್ವಿಭೂತಿ ರುದ್ರಾಕ್ಷಿ ಮಂತ್ರವೆ
ಪರಮಪರುಷಾಂಬುಧಿ ಪರಮಪರುಷಾನಂದದ ಖಣಿ
ಚಿತ್ಪಾದೋದಕ ಪ್ರಸಾದ.
ಆ ಚಿತ್ಪಾದೋದಕಪ್ರಸಾದ ಮಂತ್ರಮಣಿ ವಿಭೂತಿ
ಶರಣಲಿಂಗಜಂಗಮಚರವೆ ಘನಕ್ಕೆ ಮಹಾಘನವೆಂದಾರಾಧಿಸಿ,
ಕೂಡಿ ಎರಡಳಿದು ಭಕ್ತನೆಂಬೆರಡಕ್ಷರವೆ ಪಾವನಾರ್ಥಚಿದಂಗ,
ಆ ಚಿದ್ಘನಲಿಂಗವೆಂದಷ್ಟಾವರಣಸ್ವರೂಪ.
ಚಿದ್ಘನಗುರು ತಾನೆ ತಾನಾದ
ಬಯಲಪೂಜೆಗಳರಿದಾನಂದಿಸುವವರೆ
ನಿರವಯಪ್ರಭು ಮಹಾಂತನ ಘನಕ್ಕೆ ಘನವೆಂದವರ
ಆಳಿನಾಳಾಗಿರ್ಪೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
Art
Manuscript
Music
Courtesy:
Transliteration
Paramānubhāvajaṅgamārādhanegendu
onde paścimādri ēkadaḷapadmava samarpisi,
baccabariyānandābdhiyalli lōluptarāgirparu
sadbhakta śaraṇagaṇārādhyaru.
Ī pūjāsthānadalli aṣṭavidhārcane
ṣōḍaśōpacāragaḷillavu.
Adēnu kāraṇavendaḍe:
Saguṇa-nirguṇa, sākāra-nirākāra,
ādiliṅga anādiśaraṇasambandhaviḍidu,
sarvōpacārapūjegaḷeraḍu nityavāda
antaraṅgada paripūrṇadravya niran̄janapūjeyendu
illige sadrūpavāda guru, cidrūpavāda liṅga,
cinmayarūpavāda jaṅgamārcane.
Ī mūru sambandhācaraṇeyāgirpuvu.
Ī nilukaḍeya mīri śaivabhinnakarmigaḷante
tīrthadalli pūjeyonda māḍalāgadu.
Adēnukāraṇavendaḍe:
Śaraṇana sadrūpavāda citkāyadalli sambandhavāda
nijēṣṭhaliṅga vr̥ttagōḷakamukhaṅgaḷalli
dīkṣāguru mōkṣāguru śikṣāgurusthalavāda
sākāraguruliṅgajaṅgamavāgi nelasirpududarinda
ā iṣṭaliṅgasūtraviḍidu,
aṣṭavidhārcane ṣōḍaśōpacārava māḍuvude
saguṇārcaneyoḷagina kriyārcaneyu.
Idīga anādipramathagaṇa sukarārcane sūtravu.
Śaraṇana cidrūpavāda citprāṇadalli sambandhavāda citprāṇaliṅga
tārakākr̥ti, daṇḍakākr̥ti, kuṇḍalākr̥ti,
ardhacandrākr̥ti, darpaṇākr̥ti, jyōtirākr̥tigaḷalli
kāyānugraha prāṇānugraha indriyānugrahasthalavāda
nirākāra cidvibhūti rudrākṣi mantravāgi nelasirpududarinda
ā prāṇaliṅgasūtraviḍidu, mantra dhyāna japastōtraṅgaḷinda
sūkṣmārcaneya māḍuvude
saguṇārcaneyoḷagina jñānārcaneyu.
Idīga anādipramathagaṇa nirārcana sūtravu.
Śaraṇacinmayarūpavāda citsūryacandrāgnimaṇḍalatrayaṅgaḷalli
paramāṇumūrti bhāvaliṅga akhaṇḍajyōtirākr̥ti
akhaṇḍamahājyōtirākr̥tigaḷalli akhaṇḍamahācijjyōtirākr̥tigaḷalli
kāyārpaṇa karaṇārpaṇa bhāvārpaṇa pariṇāmārpaṇasthalavāda
niravayacitpādōdaka citprasādavāgi nelasirpuvudarinda
ā bhāvaliṅgasūtraviḍidu manōrlaya niran̄janavāda ghanamanadinda
karaṇārcaneya māḍuvude
saguṇārcaneyoḷagina mahājñāniyu.
Idīga anādipramathagaṇa niravayārcaneya sūtravu.
Ī nilukaḍegaḷinda pramathagaṇa hōda mārgava tiḷidu,
sākāravāda kāyaviḍidu banda
rūpāda aṣṭavirdhācane ṣōḍaśōpacārava
guruliṅgajaṅgamakke māḍuvudē kāyārcaneyenisuvudu.
Nirākāravāda karaṇaviḍidu banda cidrūpavāda
mantra dhyāna japastōtraṅgaḷa
cidvibhūti rudrākṣi mantrakke māḍuvude karaṇārcaneyenisuvudu.
Niravayavāda bhāvaviḍidu banda cinmayarūpāda
manōrlaya niran̄jana ghanamanōllāsa cidbeḷagugaḷa
citpādatīrtha prasādakke māḍuvude bhāvārcaneyenisuvudu.
īṅge pūrvapurātanōktiyinda sākāravāda kāyārcaneya
karasthalada iṣṭaliṅgakke, ā iṣṭaliṅgakke caitan'yavāda
caraliṅgapādakke māḍuvudu sādhya.
Gaṇaṅgaḷu nirākāravāda karaṇārcaneya
carajaṅgamaliṅgada caraṇābjada konemoneyoḷage
mūlamantramūrti cinmaṇḍalādhipati
prāṇaliṅgasūtraṅgaḷoḷ
citkaraṇaṅgaḷondugūḍi paścimādri
ēkakusamadoḷu hudugi
nijadr̥ṣṭi kaḍe sūsalīyade,
Niran̄janajaṅgamārcaneyu modalāda
cidvibhūtirudrākṣi mantrabrahmakke māḍuvudu sādhya.
Gaṇaṅgaḷu niravayavāda bhāvārcaneya
carajaṅgama jaṅgamaliṅga liṅgaśaraṇa
śaraṇa vibhūti rudrākṣi mantra,
ā cidvibhūti rudrākṣi mantrave
paramaparuṣāmbudhi paramaparuṣānandada khaṇi
citpādōdaka prasāda.
Ā citpādōdakaprasāda mantramaṇi vibhūti
śaraṇaliṅgajaṅgamacarave ghanakke mahāghanavendārādhisi,
kūḍi eraḍaḷidu bhaktanemberaḍakṣarave pāvanārthacidaṅga,
ā cidghanaliṅgavendaṣṭāvaraṇasvarūpa.
Cidghanaguru tāne tānāda
bayalapūjegaḷaridānandisuvavare
niravayaprabhu mahāntana ghanakke ghanavendavara
āḷināḷāgirpe kāṇā
sid'dhamallikārjunaliṅgēśvara.