Index   ವಚನ - 30    Search  
 
ಅನಾದಿ ಶರಣಲಿಂಗ ಗುರುಭಕ್ತ ಜಂಗಮದ ಏಕಸಮರಸೈಕ್ಯ ಅಭಿನ್ನಾರ್ಚನೆಗಳಲ್ಲಿ ತೀರ್ಥಪ್ರಸಾದ ಪೂಜೆಯ ಸಂಬಂಧವೆನಿಸಿ, ಪೂರ್ವಪುರಾತನೋಕ್ತಿಯಿಂದ ಚಿದ್ಘನಪಾದತೀರ್ಥವ ಪಡಕೊಂಡ ಶಿವಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣನು ಕಾಯ-ಕರಣ-ಭಾವಗಳ ಸಂಚಲಗಳನಳಿದುಳಿದು ನಿಃಸಂಚಲನಾಗಿ, ಕೇವಲ ಕಿಂಕುರ್ವಾಣ ಪರಿಪೂರ್ಣಸಾವಧಾನ ಭಯಭಕ್ತಿಯಿಂದ ಆ ತೀರ್ಥದ ಬಟ್ಟಲೆತ್ತಿ, ಆ ಜಂಗಮಲಿಂಗಮೂರ್ತಿಗೆ ಶರಣಾರ್ಥಿ ಸ್ವಾಮಿ, ಮಹಾಲಿಂಗಾರ್ಪಣವ ಮಾಡಬೇಕೆಂದು ಅಭಿವಂದಿಸಿದಲ್ಲಿ, ಆ ಜಂಗಮಲಿಂಗಶರಣನು ಘನಮಹಾಮಂತ್ರಸೂತ್ರವಿಡಿದು, ಪರಿಪೂರ್ಣಾನಂದ ಸಾವಧಾನಭಕ್ತಿ ಮುಖದಲ್ಲಿ ಸಲಿಸಿದಮೇಲೆ, ಪೂರ್ವದಂತೆ ಆ ಪ್ರಸನ್ನಪ್ರಸಾದತೀರ್ಥದ ಬಟ್ಟಲ ಗರ್ದುಗೆಯಲ್ಲಿ ಮೂರ್ತಗೊಳಿಸಿ ಆ ಮೇಲೆ ತಾನು ಗರ್ದುಗೆಯ ಬಿಟ್ಟೆದ್ದು, ಪರಾತ್ಪರ ಬ್ರಹ್ಮಜ್ಯೋತಿರ್ಮಯಸ್ವರೂಪ ಜಂಗಮಲಿಂಗ ಲಿಂಗಜಂಗಮದ ಶೇಷೋದಕ ಪರಿಪೂರ್ಣಾನಂದ ತೀರ್ಥ ಸ್ತೋತ್ರವಂ ಮಾಡಿ, ಸರ್ವಾಂಗಪ್ರಣುತನಾಗಿ ಪೊಡಮಟ್ಟು, ಹರಹರಾ ಶಿವಶಿವಾ ಜಯಜಯಾ ಕರುಣಾಕರ ಭಕ್ತವತ್ಸಲ ಭವರೋಗವೈದ್ಯ ಮತ್ಪ್ರಾಣನಾಥ ಮಹಾಲಿಂಗಜಂಗಮವೆಯೆಂದು, ಅಂತರಂಗದ ಪರಿಪೂರ್ಣರೆ ನಿರವಯಪ್ರಭು ಮಹಾಂತರ ಘನಶರಣ ಲಿಂಗ ತಾನೆಯೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.