Index   ವಚನ - 38    Search  
 
ಶ್ರೀಗುರುಕರಜಾತರೆನಿಸಿ, ನಿಜಮೋಕ್ಷಾಪೇಕ್ಷನೆನಿಸಿ, ಸ್ವಯಚರಪರ ಭಕ್ತಗಣಾರಾಧ್ಯರ ಅರ್ಚನೆ ಪೂಜನೆ ಮಾಡಿ, ದಾಸೋಹಂಭಾವದಿಂದ ಪರತರಬ್ರಹ್ಮಪರಿಪೂರ್ಣಾನಂದವಸ್ತುವೆಂದು ಸಮರಸಾಚರಣೆಯಿಂದ ಹತ್ತುಹನ್ನೊಂದು ಕೊಟ್ಟು ಕೊಂಡ ಮೇಲೆ, ಸಂಕಲ್ಪಭಾವ ತಥ್ಯಮಿಥ್ಯಗಳಿಂದ ಆಸೆ ಆಮಿಷದ ಪಾಶಬದ್ಧ ಜಡಜೀವಿಗಳ ಹುಸಿಮಾತನಾಲಿಸಿ, ವಿವೇಕತಪ್ಪಿ, ನಸುಗುನ್ನಿಕಾಯಂತೆ ಮೋರೆಯಾಗಿ, ತುಮುರೆಕಾಷ್ಠದಂತೆ ನುಡಿಯಾಗಿ, ವಾರೆನೋಟಗಳಿಂದ ಸಮರಸವನುಳಿದು, ಭಿನ್ನಭಾವದಿಂದ ಕುಂದುನಿಂದ್ಯವ ನುಡಿವುದೊಂದು ದುರಾಚಾರ. ನುಡಿಸೂಸಿದ ಮೇಲೆ ಒಬ್ಬರೊಬ್ಬರು ಅವಿಚಾರಿಗಳಾಗಿ, ಬಾಜಾರಕ್ಕೆ ನಿಂತು, ತನಗಿಂದ ಸ್ವಲ್ಪ ಮನುಷ್ಯರನಾಶ್ರಯಿಸಿ, ಪಂಥಪರಾಕ್ರಮಿಗಳಿಂದ ತಥ್ಯಮಿಥ್ಯವ ನುಡಿದು, ಅರ್ಚನಾರ್ಪಣಗಳ ತೊರೆದು, ದೋಷಾರ್ಥಿಯಾಗಿ ವರ್ತಿಸುವುದೊಂದು ದುರಾಚಾರ. ಭಕ್ತಗಣಂಗಳು ವಾರಬಡ್ಡಿಗಳ ಕೊಟ್ಟು ಕೊಂಡು ವ್ಯವಹರಿಸಿ, ಈಷಣತ್ರಯದ ಅಂಗವಿಷಯದಿಂದ ದ್ರವ್ಯವ್ಯಾಪಾರಿಯಾಗಿ, ದುರಾತ್ಮರಂತೆ ಬಾಜಾರಕ್ಕೆ ಬಿದ್ದು ಕಠಿಣನುಡಿಗಳ ಬಳಸುವುದೊಂದು ದುರಾಚಾರ. ಹೊನ್ನು ಹೆಣ್ಣು ಮಣ್ಣು ಧಾನ್ಯ ವಸ್ತ್ರಗಳಿಗೆ ಹೊಣೆ ಜಾಮೀನುಗಳಾಗಿ ಅಸನ ವಸನದಿಚ್ಛೆಗೆ ಮಿತಿದಪ್ಪಿದಲ್ಲಿ, ಸಾಕ್ಷಿ ವಾದಕ್ಕೆ ನಿಂತು, ಆಡಬಾರದ ಮಾತನಾಡುವುದೊಂದು ದುರಾಚಾರ. ಗುರುಹಿರಿಯ ಪಿತ-ಮಾತೆಗಳಿಗೆ ತಾ ಗಳಿಸಿದ ದ್ರವ್ಯವ ವಂಚಿಸಿ, ಇದ್ದೂ ಇಲ್ಲಯೆಂದು ಹುಸಿನುಡಿಯ ನುಡಿವುದೊಂದು ದುರಾಚಾರ. ಗುರುಚರಲಿಂಗಮೂರ್ತಿಗಳು ಹಸಿವಿಗನ್ನ, ಶೀತಕ್ಕೆ ವಸ್ತ್ರ, ಪಾದಕ್ಕೆ ವಾಹನವಾದುದ ಬೇಡಿದಲ್ಲಿ ತನಗೆ ತ್ರಾಣಿದ್ದು ಅವರಿಗೆ ಈಗ ದೊರೆಯದೆಂದು ಪ್ರಪಂಚನುಡಿಯ ನುಡಿವುದೊಂದು ದುರಾಚಾರ. ಈ ದುರಾಚಾರ ಹುಸಿನುಡಿಗಳನಳಿದುಳಿದು, ಭ್ರಾಂತುಭ್ರಮೆಗಳ ನೀಗಿ, ತನ್ನ ನಡೆನುಡಿಗಳು ತನಗೆ ಪ್ರಮಾಣವಾಗಿ, ನಿರ್ವಂಚಕತನದಿಂದ ಶ್ರುತಿಗುರುಸ್ವಾನುಭಾವವಿಡಿದು, ತಥ್ಯಮಿಥ್ಯವನಡಿಮೆಟ್ಟಿ, ಕಿಂಕರಭಾವದೊಳು ಗುರುಹಿರಿಯರ ಪ್ರಮಾದವಶದಿಂದ ಪ್ರಮಥಗಣಮಾರ್ಗವ ಬಿಟ್ಟಾಚರಿಸುವದ ಪರಶಿವಲಿಂಗಮೂರ್ತಿ ಹರಗಣಸಾಕ್ಷಿಯಾಗಿ ತಾನು ಕಂಡಲ್ಲಿ, ಅವರನಾಚರಿಸದಾಚಾರದ ಸ್ಥೂಲಸೂಕ್ಷ್ಮವಾದೊಡೆ ಹರಗಣಂಗಳೊಡನೆ ಅವರಿಗೆ ಶರಣುಹೊಕ್ಕು, ಹರಗುರುವಾಕ್ಯಪ್ರಮಾಣವಾಗಿ ಮೃದುತರ ನುಡಿಗಳಿಂದ ತಾವು ಅವರೊಡನೆ ಏಕಭಾವದಿಂದ ಕ್ರಿಯಾಲೀಲೆಯ ಸಮಾಪ್ತವ ಮಾಡುವುದು. ಇದಕ್ಕೆ ಮೀರಿ ಸ್ಥೂಲವಾದೊಡೆ ಮೌನಧ್ಯಾನದಿಂದ ಪರಶಿವಲಿಂಗಸಾಕ್ಷಿಯಾಗಿ, ಹರಗಣಕ್ಕೊಪ್ಪಿಸಿ, ಹತ್ತು ಹನ್ನೊಂದರ ಸಮರಸಾನುಭಾವವ ತ್ಯಜಿಸಿ, ಆಪ್ಯಾಯನಕ್ಕನ್ನ, ಸೀತಕ್ಕೆ ವಸ್ತ್ರ, ಲಾಂಛನಕ್ಕೆ ಶರಣೆಂದು ಬಯಲಿಗೆ ಬೀಳದೆ ಸುಮ್ಮನಿರ್ಪುದೆ ಪ್ರಮಥಗಣಮಾರ್ಗವು. ಈ ಸನ್ಮಾರ್ಗವನುಳಿದು ಕಿರಾತರಂತೆ ಹುಸಿಶಬ್ದ, ಹೊಲೆಶಬ್ದ, ಹೇಸಿಕೆಶಬ್ದ, ವಾಕರಿಕೆಶಬ್ದ, ಬಾಂಡಿಕಶಬ್ದ, ನೀಚರನುಡಿ, ಷಂಡರಮಾತು, ಕಳ್ಳರನುಡಿ, ಜಾರರನುಡಿ, ಜೂಜುಗಾರರನುಡಿ, ಆಟಕಾರರನುಡಿ, ಬೇಟೆಗಾರರನುಡಿ, ಕುಲಛಲಗಾರರನುಡಿ, ಲಾಹರಿಗಾರರನುಡಿ, ಅಶನಘಾತಕರನುಡಿ, ಲಂಚಗಾರರನುಡಿ, ರಿಣಪಾತಕರನುಡಿ, ಮೋಸಗಾರರನುಡಿ, ಭ್ರಾಂತರನುಡಿ, ಕೋಪಿಗರನುಡಿ, ಆಚಾರಹೀನ ನಡೆಗೆಟ್ಟರನುಡಿ, ಬಳ್ಳದತುದಿಹೀನ ಶಬ್ದದಂತೆ ತುಂಟ ತುಡುಗುಣಿ ಹಲವು ಮಾತುಗಳ ಬಳಕೆಯುಳ್ಳುದೆ ಚತುರ್ಥಪಾತಕವು. ಇದಕ್ಕೆ ಹರವಾಕ್ಯ ಸಾಕ್ಷಿ: ಕುಶಬ್ದಂ ಹೀನಶಬ್ದಂ ಚ ಚಾಂಡಾಲಃ ಶ್ವಪಚೋsಪಿ ವಾ | ಹೀನಶಬ್ದಸ್ಯ ಪಾಪಾಚ್ಚ ನರಕೇ ಕಾಲಮಕ್ಷಯಂ || ಅನೃತಂ ಚಾಪಶಬ್ದಂ ಚ ನಿಂದಕೋ ಗುರುತಲ್ಪಗಃ | ಗಣಾದಿವಾದದೂಷ್ಯಶ್ಚ ವೇಶ್ಯಾಪುತ್ರಸ್ತಥೈವ ಚ || ಪರನಿಂದಾವಂದನಾಶ್ಚ ಲಿಂಗಸಂಗಿವಿವರ್ಜಿತಂ | ಪ್ರಮಾದಂ ಕುರುತೇ ವಾಣ್ಯಾ ಮೋಕ್ಷೋ ನಾಸ್ತಿ ಮಹೇಶ್ವರಿ || ಅನ್ಯದೋಷೇಣ ನಿಂದ್ಯಮಾಸ್ತು ಸ್ವದೋಷಗುಪ್ತಪಾತಕಃ | ಗುರುಭ್ರಷ್ಟಸ್ಯ ಚಾಂಡಾಲೋ ರೌರವಂ ನರಕಂ ವ್ರಜೇತ್ ||'' ಇಂತೆಂದುದಾಗಿ, ಪರಮಾರಾಧ್ಯ ಶ್ರೀಗುರುಕಟಾಕ್ಷೆಯಿಂದ ತನ್ನ ತಾನರಿದು, ಈ ಲಿಂಗಾಂಗಸಂಗಸಂಬಂಧದಾಚರಣೆಯ ಸುಖವು ಏನು ತಪಸ್ಸಿನ ಫಲವೋಯೆಂದರಿದು ಮರೆದರೆ ಇನ್ನೀ ನಿಜಮೋಕ್ಷವು ದೊರೆಯದೆಂದು ಗುರುಹಿಯರ ನಡೆನುಡಿಗಳಾಲಿಸಿ, ನಡೆನುಡಿಭಿನ್ನವಾಗದಂತೆ ಚತುರ್ಥಪರಮದ್ರೋಹದ ಪಾತಕಮಂ ನಿರಸನಂಗೈದು ನಿಜಪರಶಿವಘನಕ್ಕೆ ಘನವೆನಿಸಿರ್ಪುದು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.