Index   ವಚನ - 37    Search  
 
ಶ್ರೀಗುರು ಪರಮಾರಾಧ್ಯ ಪ್ರಮಥಗಣ ಸಾಕ್ಷಿಯಾಗಿ, ಮನ ಕೊರಗಿ, ಹಸ್ತ ಪಾದ ಬಳಲಿ, ತೃಣಕಾಷ್ಠವೆ ಮೊದಲು ನವರತ್ನಂಗಳೆ ಕಡೆಯಾದ ಸಮಸ್ತ ವ್ಯವಹಾರದಿಂದ, ಸತ್ಯಶುದ್ಧದಿಂದ ಗುರುಹಿರಿಯರಿಗೆ ಖೊಟ್ಟಿಯಾಗದೆ, ಲಿಂಗನಡೆ ಲಿಂಗನುಡಿ ಲಿಂಗನೋಟ ಲಿಂಗಕೂಟ ಲಿಂಗಬೇಟ ಲಿಂಗರತಿ ಲಿಂಗಭೋಗ ಲಿಂಗಾಭಿಮಾನ ಲಿಂಗಾರಾಧನೆ ಲಿಂಗಾರ್ಪಣ ಲಿಂಗಾನುಭಾವ ಲಿಂಗಾಸನ ಲಿಂಗಸೋಂಕು ಲಿಂಗನಂಟು ಲಿಂಗಗತಿಮತಿ ಲಿಂಗಸತಿಪತಿ ಲಿಂಗಮಾತೆ ಲಿಂಗಪಿತ ಲಿಂಗಬಂಧು ಲಿಂಗಪದಾರ್ಥ ಲಿಂಗದ್ರವ್ಯ ಲಿಂಗಧನಧಾನ್ಯ ಲಿಂಗಾಭರಣ ಲಿಂಗಶಿಶುವು ಲಿಂಗಮೋಹ ಲಿಂಗಾಚಾರ ಲಿಂಗಲಯ ಲಿಂಗಪರೋಪಕಾರಿ ಲಿಂಗದಾಸೋಹ ಲಿಂಗಾಂಗಸಂಗಸಮರತಿಯಿಂದ ಪರಶಿವಯೋಗಸಂಪನ್ನರಾಗಿ, ಗುರುಕೃಪಾನಂದದಲ್ಲಿ ಚಿತ್ತವಚ್ಚೊತ್ತಿದಂತೆ ಕಾಯಕವ ಮಾಡಿ, ಕುಟಿಲ ಕುಹಕಂಗಳಳಿದುಳಿದು, ಅನಾಚಾರಿಗಳನ್ನೋದಕವ ಕೊಳ್ಳದೆ, ಉಪಾಧಿ ನಿರುಪಾಧಿ ಸಹಜಜಂಗಮಸ್ಥಲದ ವರ್ಮಾದಿವರ್ಮವನರಿದು, ಮಾಡಿ ಮಾಟವ ಮರೆದು, ಕೂಡಿ ಕೂಟವ ಕಳೆದುಳಿದು, ಸತ್ಪಾತ್ರ ಅಪಾತ್ರವ ಎಚ್ಚರದಿಂ ನೋಡಿ, ತನುಮನಧನ ವಂಚನೆಯಿಲ್ಲದೆ, ರಿಣಾತುರವೆಂಬ ಹಿಂದಣಮಾರ್ಗವ ಮೆಟ್ಟದೆ, ಸೋಹಂ ಕೋಹಂ ನಾಹಂಭಾವವಳಿದುಳಿದು, ಶಿವಾಚಾರಸಮರತಿ ದಾಸೋಹಂಭಾವದಿಂದಾಚರಿಸುವಾತನೆ ಭವಿಮಾಟಕೂಟವಳಿದುಳಿದು ನಿಜಸದ್ಭಕ್ತ ಆಚಾರಲಿಂಗಪ್ರಸನ್ನಪ್ರಸಾದಿ. ಇಂತಪ್ಪ ಸದ್ಭಕ್ತನಂಗಳವೆ ಕೈಲಾಸವೆಂದು ಹರಗುರುವಾಕ್ಯವರಿದು, ಭಾವಭರಿತವಾಗಿ, ಸತ್ವಗುಣವಳಿದುಳಿದು, ಮಹಾಜ್ಞಾನದಂಡಾಗ್ರಮಂ ಪಿಡಿದು, ಸತ್ಯಶುದ್ಧ ನುಡಿಯೆಂಬ ಪ್ರಣಮನಾದಗಂಟೆಯಂ ಕಟ್ಟಿ, ರಜೋಗುಣವ ಹೊದ್ದದೆ, ಮಹದರುವೆಂಬ ಕಮಂಡಲವ ಧರಿಸಿ, ತಮೋಗುಣ ನಷ್ಟವಾದ ಪರಮಪರುಷರಸದ ಜೋಳಿಗೆಯಂ ಪಿಡಿದು, ಕರಣೇಂದ್ರಿಗಳ ಹಸಿವು ತೃಷೆ ವಿಷಯ ವ್ಯಸನಗಳ ಛೇದಿಸಿದ ಜಂಗಿನ ಗೆಜ್ಜೆಗಳಂ ಧರಿಸಿ, ಪರಮಪಾವನ ನಿಜಮೋಕ್ಷಮಂದಿರವೆಂಬ ಮಂತ್ರಸ್ಮರಣೆಯೊಳ್ `ಶ್ರೀಗುರುಧರ್ಮ ಕೋರಧನಧಾನ್ಯದ ಭೀಕ್ಷಾ'ಯೆಂದು ಭಕ್ತಗಣಂಗಳಿಂಗಿತವರಿತು, ಘನಮನ ಕಲಕದಂತೆ ಸುಯಿಧಾನದಿಂದ ಸುಳಿಗಾಳಿಯಂತೆ ಸುಳಿದು, ಅತಿರತಿಮೋಹದಿಂದ ಪರಮಹರುಷಾನಂದದೊಳ್ ಬೇಡಿತಂದು, ನಿರ್ವಂಚಕನಾಗಿ, ಸತ್ಯಶುದ್ಧ ದೃಢಚಿತ್ತದಿಂದ, ಘನಲಿಂಗಸಂಗಸಮಪತಿಗಳೊಳ್ ಕೂಡೆರಡಳಿದುಳಿದು, ಹಿಗ್ಗು-ಹೆಮ್ಮೆ, ಸಿರಿ-ದರಿದ್ರ, ಸುಖ-ದುಃಖ, ಸ್ತುತಿ-ನಿಂದೆ, ಪುಣ್ಯ-ಪಾಪ, ಭೋಗ-ಯೋಗ, ಕಾಮ-ಕ್ರೋಧ, ಲೋಭ-ಮೋಹ, ಮದ-ಮತ್ಸರ, ಆಸೆ-ಆಮಿಷಗಳ, ಹಸಿವು-ತೃಷೆಗಳ ನೀಗಿ, ಸದ್ಭಕ್ತಗಣಸಮ್ಮೇಳದಿಂದ ಗುರುಚರಪರಕ್ಕೆ ತ್ರಿವಿಧಾರ್ಚನೆಗಳರಿದು, ಒಂದೂಡಲಾಗಿ, ಪರಿಣಾಮವೆ ಭಕ್ತಿ ವಿರಕ್ತಿ ಜ್ಞಾನಾನುಭಾವ, ಪರಿಣಾಮವೆ ಚಿದಂಗಲಿಂಗಮುಖ ಶಕ್ತಿ ಶುಚಿರುಚಿ ಹಸ್ತಪದಾರ್ಥಪ್ರಸಾದ, ಘನಸಮ್ಮತ ವಿಚಾರಮಂ ಅರಿದಾನಂದದಿಂದ ಪರಿಪೂರ್ಣ ನಡೆನುಡಿ ಕೊಟ್ಟುಕೊಂಬುವ ದಾನಿಯೆ ಸದ್ವೀರಮಹೇಶ್ವರನು. ಇಂತೆಸೆವ ಪ್ರಮಥಗಣ ಭಕ್ತಮಹೇಶ್ವರರಾಚರಣೆಯ ಘನಮಾರ್ಗವನರಿಯದೆ, ಆಡಂಬರವೇಷಮಂ ಧರಿಸಿ, ಕುಟಿಲ ಕುಹಕತನದಿಂದ ಅನಾಚಾರ ರಾಜರನೋಲೈಸಿ, ಚಾಡಿ ಚಿತಾರಿಕೆ ಸಾಕ್ಷಿ ವಾದ ಸಹಜವ ಹುಸಿಮಾಡಿ, ಹುಸಿಯನೆ ಸಹಜವ ಮಾಡಿ, ಕುಂಟಣಿತನದಿಂದ ಧನಧಾನ್ಯಾಭರಣವ ಗಳಿಸಿ, ಈಷಣತ್ರಯಮೋಹದಿಂದ ಒಡಲುಪಾಧಿವಿಡಿದು, ಭಕ್ತಮಹೇಶ್ವರರೆಂದು ಬೊಗಳುವದೊಂದು ದುರಾಚಾರ. ತಳ್ಳಿ ತಗಾದಿ ಜಾರತನ ಪಂಚಪಕ್ಷ ಮೊದಲಾದ ಗಾರುಡವಿದ್ಯೆಗಳಿಂದ ಧನ ಧಾನ್ಯ ವಸ್ತ್ರಾಭರಣವ ಗಳಿಸಿ ಅಕ್ರಿಯೆ ಅನಾಚಾರದಿಂದ ದೇಹವಿಡಿದಿಪ್ಪುದೊಂದು ದುರಾಚಾರ. ಹಲಾಯುಧನ ಹೊಲಮನೆ ಮೊದಲಾದ ಸಮಸ್ತ ವ್ಯವಹಾರಗಳಲ್ಲಿ ಆರೂ ಕಾಣದಂತೆ ಅಣುರೇಣುತೃಣಕಾಷ್ಠವಾಗಲಿ, ಮೋಸಗಾರಿಕೆಯಿಂದ ಒಡಲುಪಾಧಿವಿಡಿದಾಚರಿಸುವದೊಂದು ದುರಾಚಾರ. ಆಯುಧವ ಕಟ್ಟಿ, ರಣಾಗ್ರಕ್ಕೆ ಹೋಗಿ, ಜೀವಹಿಂಸೆಗಳಿಂದ ಧನಧಾನ್ಯವಸ್ತ್ರಾಭರಣವ ಗಳಿಸಿ, ರೂಪಲಾವಣ್ಯದಿಂದ ಒಡಲುಪಾಧಿಹೊರೆವುದೊಂದು ಅತಿ ಕಠಿಣವಾದೊಂದು ದುರಾಚಾರ. ಸತ್ಯಶುದ್ಧ ವ್ಯವಹಾರಗಳಲ್ಲಿ ಪತ್ರವ ಬರೆದುಕೊಟ್ಟು, ಮೃದುನುಡಿಯಿಂದ ಧನಧಾನ್ಯವ ತಂದು, ಪುತ್ರಮಿತ್ರ ಕಳತ್ರಯಕೆ ಮಾಡಿ, ಮತ್ತವರು ಬೇಡಿದರೆ ತಿರುಗಿ ಹುಸಿನುಡಿಯ ನುಡಿದು, ಅವರ ಪದಾರ್ಥವ ಚಾಗೆಯ ಮಾಡಿ, ನಿಂದೆ ಕುಂದು ಕೊರತೆಗಳಿಂದ ದೂಷಿಸುವುದೊಂದು ದುರಾಚಾರ. ಇಂತು ಪಂಚವಿಧಪಾಶಬದ್ಧರಾಗಿ, ಅವಿಚಾರದಿಂದ ಭಕ್ತಮಹೇಶ್ವರರೆಂದು ನುಡಿದು, ಅನಾಚಾರ ನಡೆಯ ನಡೆವುದು ತೃತೀಯ ಪಾತಕವು. ಇದಕ್ಕೆ ಹರವಾಕ್ಯ ಸಾಕ್ಷಿ: ಪರದ್ರವ್ಯಂ ಪರಾರ್ಥಂ ಚ ವರ್ಜಯೇತ್ ಭಾವಶುದ್ಧಿಮಾನ್ | ಪ್ರಮಾದಾತ್ ಸ್ಪರ್ಶನಾಚ್ಚೈವ ರೌರವಂ ನರಕಂ ವ್ರಜೇತ್ || ಅನ್ನಸ್ಯ ಧನಧಾನ್ಯಸ್ಯ ಲಿಂಗಭಕ್ತಿವಿವರ್ಜಿತಃ | ತಸ್ಕರಃ ಅಪಹಾರಾತ್ ಶ್ವಾನಜನ್ಮನಿ ಜಾಯತೇ || ಸತ್ಯಂ ಧರ್ಮೋ ಯಥಾರ್ಥಂ ಚ ಶಿವಧರ್ಮೇಣ ಸುಖಂ ಭವೇತ್ | ಅನ್ಯತ್ರ ಚಿಂತಿತಾತ್ ಕಾರ್ಯಾತ್ ಮೋಕ್ಷೋ ನಾಸ್ತಿ ವರಾನನೇ || ಉತ್ತಮಾರಣ್ಯಪುಷ್ಪಂ ಚ ಮಧ್ಯಮಂ ವನಪುಷ್ಪಯೋಃ | ಕನಿಷ್ಠಂ ಯಾಚಿತಂ ಪುಷ್ಪಂ ಚೋರಪುಷ್ಪಂತು ನಿಷ್ಫಲಂ ||'' ಇಂತೆಂದುದಾಗಿ, ಶ್ರೀಗುರುಕಟಾಕ್ಷೆಯಿಂದ ತನ್ನ ತಾನರಿದು ಸ್ವಾತ್ಮಾನುಭಾವದೊಳ್ ಸತ್ಯಶುದ್ಧನಾಗಿ, ಪರರೊಡವೆಯೆಂಬುದೆ ಕೇಡು, ಕಾಯಾರ್ಜಿತವೆಂಬುದೆ ನಿಜಮೋಕ್ಷವೆಂದರಿದಾನಂದದಿಂದ ಆ ತೃತೀಯಪಾತಕಮಂ ನಿರಸನಂಗೈದು ದುರಿತಕರ್ಮವಂ ಒರೆದೊರೆದು ಕಂಡ್ರಿಸಿ, ಕಳೆದುಳಿದ ನಿಜಮುಕ್ತನೆ ಶಿವಯೋಗ ಸನ್ಮಾರ್ಗಿ ಸದ್ಭಕ್ತ ಮಹೇಶ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.