Index   ವಚನ - 44    Search  
 
ಗುರುಮಾರ್ಗಾಚಾರ ಸನ್ಮಾನಿತರೆನಿಸಿ ಅನಾದಿ ಶರಣಗಣ ಸಮರಸೈಕ್ಯವನುಳ್ಳ ಶ್ರೀ ರುದ್ರಾಕ್ಷಿಯಾಚರಣೆ ಹಸ್ತಮಣಿಗಳ ಸಂಬಂಧ ಸುಗುಣಾನಂದ ಏಕಾಕ್ಷರ ತ್ರಯಾಕ್ಷರ ಪಂಚಾಕ್ಷರ ಮೊದಲಾದ ಮಿಶ್ರಾಮಿಶ್ರಗಳ ಸಂಪದೈಕ್ಯಾನುಭಾವದ ನಿಜೋಪದೇಶವನರಿಯದೆ, ಶೈವಪಾಷಂಡಿಗಳ ಹಠಕರ್ಮ ಕ್ರಿಯಾಯೋಗಾಭ್ಯಾಸವ ಬಳಸಿ, ಅನಂತ ಮಣಿಮಾಲೆಗಳಂ ಪಿಡಿದು ಕುಟಿಲ-ಕುಹಕ, ಯಂತ್ರ ತಂತ್ರ, ಜಪ-ತಪ, ಹೋಮ ನೇಮ ಅನುಷ್ಠಾನವೆಂಬ ಕಾಂಕ್ಷೆವಿಡಿದು, ಫಲಪದಂಗಳಂ ಬಯಸಿ, ಮಹಿಮಾಪುರುಷರೆನಿಸಿ, ಉಂಡುಟ್ಟು ಕಂಡ ಕನಸ ಹೇಳಿ, ಭೋಗದಲ್ಲಿಸಂಪನ್ನನೆನಿಸಿ, ಬಯಲಭ್ರಾಂತರಾಗಿ, ಒಂದರಲ್ಲಿ ನೈಷ್ಠೆಗಾಣದೆ, ಗುಪ್ತದ್ರೋಹಿಗಳಾಗಿ, ಸತ್ಯಶುದ್ಧ ಪುರಾತರ ನಡೆನುಡಿಯ ಸಾಧಿಸದೆ, ಮಲತ್ರಯಮೋಹದಲ್ಲಿ ಅಭಿರತಿಯಿಟ್ಟು ನಾವು ಸ್ಥಲದ ಭಕ್ತಜಂಗಮವೆಂದು ನಡೆಗೆಟ್ಟನುಡಿ ನುಡಿವುದೆ ಅಂತರಂಗದ ಪಂಚಮಪಾತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.