Index   ವಚನ - 45    Search  
 
ಶ್ರೀ ಗುರುಕರಜಾತರು ಆ ಹಿಂದೆ ಹೇಳಿದ ಪಾತಕಗುಣನಿರಸನಂಗೈದು, ಅಂತರಂಗದ ಪಾತಕಕ್ಕೆ, ಶಂಕರಿಗೆ ಮೋಹದ ಕಂದನಾದ ರೇಣುಕಾರ್ಯರಿಗೆ ಉಪದೇಶಿಸಿದರೇನು? ಇದಕ್ಕೆ ಹರನಿರೂಪ ಸಾಕ್ಷಿ: “ಅನೃತಂ ಅಸ್ಥಿರಂ ವಾಕ್ಯಂ ವಚನಂ ಪಂಕ್ತಿಭೇದನಂ| ಔದಾಸೀನ್ಯಂ ನಿರ್ದಯತ್ವಂ ಷಡ್ವಿಧಂ ಭವಿಮಿಶ್ರಿತಂ|| ಷಡೂರ್ಮಿ ಷಡ್ವರ್ಗಂ ಚೈವ ಷಡ್ಭಾವ ಷಡ್ಭ್ರಹ್ಮಸ್ತಥಾ| ಷಡ್ವಿಷಯಾನ್ನರಕಂ ಯಾತಿ ಗುಪ್ತಪಾತಕವಂಶಜಃ|| ಮಾತೃದ್ರೋಹೀ ಪಿತೃದ್ರೋಹೀ ಲಿಂಗಬಾಹ್ಯಪರಾರ್ಥಕಃ| ಅನ್ಯದೋಷೇಣನಿಂದ್ಯಸ್ತು ತಸ್ಯ ಚಾಂಡಾಲವಂಶಜಃ||” ಇಂತೆಂದುದಾಗಿ, ಗುರುಮಾರ್ಗಾಚಾರ ಪುತ್ರ ನಿಜಮುಕ್ತಿಸ್ವರೂಪರು ಅಂತರ್ಬಾಹ್ಯಂಗಳಲ್ಲಿ ಕರ್ಮದಾಗರವೆಂಬ ಪಂಚಮಹಾಪಾತಕವಾಗೊಪ್ಪುವ ಶಿವನ ಮಾಯಾಂಶಪಾಶವ ಗುರುಮಾರ್ಗಾಚಾರವೆಂಬ ಹಡಗವನೇರಿ ಅಸತ್ಯದ ಕಡಲದಾಂಟಿ, ಪರಮಾನಂದಪುರವ ಹೊಕ್ಕು, ನಿರಂಜನಪ್ರಭುರಾಜನೊಡವೆರೆದು ಹಿಂದಣಾಸೆ ಮುಂದಣ ಬಯಕೆಯಂ ಮರೆದು, ನಿಜಾನುಭಾವಪರಶಿವಯೋಗಾನಂದದಲ್ಲಿ ನಿರ್ದೇಹಿಗಳಾಗಿ, ಸತ್ಯಶುದ್ಧ ನಡೆನುಡಿಯುಳ್ಳವರೆ ಕಾರಣಾರ್ಥ ಬಂದ ಪರಶಿವಗಣಂಗಳು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.