Index   ವಚನ - 55    Search  
 
ಕರ್ಮಕಾಂಡಿ ಲಿಂಗಬಾಹ್ಯರು ವರ್ತಿಸುವಂಥ ಎಂಜಲಸೂತಕನಿರಸನದ ವಚನವದೆಂತೆಂದೊಡೆ: ಶ್ರೀಗುರುವಿನ ಕರುಣಕಟಾಕ್ಷಕೃಪಾನಂದದಿಂದ ತನುಮನ ಶುದ್ಧ ಸಿದ್ಧವಿಲ್ಲದೆ, ಬಾಹ್ಯಾಂತರಂಗಳಲ್ಲಿ ಮಾಯೋಚ್ಛಿಷ್ಟವಾದ ಅನಾರ್ಪಿತ ಭುಂಜಕರಿಗೆ ಎಂಜಲುಂಟಲ್ಲದೆ, ಪರಮಾರಾಧ್ಯ ನಿಜವೀರಶೈವೋದ್ಧಾರಕ ಶ್ರೀಗುರುವಿನ ಕರುಣಕಟಾಕ್ಷೆಯಿಂದ ನಿಜೇಷ್ಟಲಿಂಗಸಂಬಂಧದಿಂದ ತನುಮನಶುದ್ಧವಾದ ಲಿಂಗಜಂಗಮಪ್ರಸಾದಭೋಗೋಪಭೋಗಿಗಳಿಗೆ ಎಂಜಲಸೂತಕವೆಲ್ಲಿಹದೋ? ಲಿಂಗಾಂಗಸಂಬಂಧಿಗಳಿಗೆ ಎಂಜಲಕಾಯವೆಂದು ನುಡಿವ ನುಡಿಯೇ ಎಂಜಲವಲ್ಲದೆ, ಚಿದಂಗ ಚಿದ್ಘನಲಿಂಗಸಂಗಮರಸೈಕ್ಯರಿಗೆ, ಐಕ್ಯಸೂತ್ರರಿಗೆ ಎಂಜಲಸೂತಕ ನಾಸ್ತಿ. ಈ ನುಡಿಗೆ ಶ್ರೀ ಶಾಂಭವೀಶಕ್ತಿಯರು ಬೆಸಗೊಂಡ ಹರನಿರೂಪಣಮುಂಟು ಇದ ತಿಳಿದು ಹರಗಣಂಶೋದ್ಧಾರಕ ಶಿವಪ್ರಸಾದಿಗಳು ಆಚರಿಸುವುದು. ಸಾಕ್ಷಿ: ಭಾಂಡಸ್ಯ ಭಾಜನಂ ಚೈವ ಭೋಜನೇಪಿ ನಿರಂತರಂ | ಪ್ರಸಾದೋಯಂ ಅತಸ್ಸೂತಮಿಥ್ಯಸ್ಯ ಮಹಿಮಾ ಖಲು || ನೈವೇದ್ಯಂ ಪುರತೋ ನ್ಯಸ್ತಂ ಪರಾನ್ನಾದೀಕೃತಂ ಮಯಾ | ವಸನ್ ಭಕ್ತಸ್ಯ ಜಿಹ್ವಾಗ್ರೇ ಸುರುಚಿಃ ವಸಾಮಿ ಕಮಲೋದ್ಭವ || ಭಕ್ತಜಿಹ್ವಾಗ್ರತೋ ಲಿಂಗಂ ಲಿಂಗಜಿಹ್ವಾಗ್ರತೋ ರುಚಿಃ | ರುಚಿ ಜಿಹ್ವಾ ಪ್ರಸಾದಂ ಚ ಪ್ರಸಾದಂ ಪರಮಂ ಪದಂ || ಪ್ರಸಾದಂ ಚ ಪರಂ ಬ್ರಹ್ಮ ಬ್ರಹ್ಮಪ್ರಸಾದಮೇವ ಚ | ಕೇವಲಂ ಶಿವಮಯಂ ಚ ಮನಶ್ಚ ಶಿವಲಿಂಗಕಂ || ಪ್ರಸಾದಂ ಗಿರಿಜಾದೇವಿ ಸಿದ್ಧಿದಂ ನರಗುಹ್ಯಕಂ | ವಿಷ್ಣು ಪ್ರಮುಖದೇವಾನಾಮಗ್ರಗಣ್ಯಮಗೋಚರಂ || ಎಂದುದಾಗಿ, ಶ್ರೀಗುರುಕರುಣದಿಂದ ಚಿದಂಗಲಿಂಗಸಂಗಸಂಬಂಧಿಯಾದ ಸದ್ಧರ್ಮ ಸದ್ಭಕ್ತಮಹೇಶ್ವರರ ಕಾಯವೆ ಪರಂಜ್ಯೋತಿರ್ಮಯ ಪರಶಿವಂಗೆ ದೇವಂಗೆ ರೂಪಾದ ಶುದ್ಧಪ್ರಸಾದ, ಮನವೆ ರುಚಿಯಾದ ಸಿದ್ಧಪ್ರಸಾದ, ಪ್ರಾಣವೆ ಪ್ರಸಿದ್ಧಪ್ರಸಾದ. ಸತಿಸುತರ ಬಾಹ್ಯಾಂತರಂಗವೆ ಲಿಂಗಜಂಗಮದಾಪ್ಯಾಯನಪ್ರಸಾದ. ಸಂಬಂಧದಾಚರಣೆಯ ಪರಶಿವಗಣಂಗಳ ನಿಜೋಪದೇಶವಿದ್ದುದರಿಂದ ಅಂತಪ್ಪ ಮಹಿಮರಿಗೆ ಒಬ್ಬರು ಪೂಜಿಸಿದ ಎಂಜಲದೈವವ ಪೂಜಿಸಿ, ಅಂಧಕರಂಧಕರು ಕೂಡಿದಂತೆ ನಿಜಸಂಗಮನಾಥನರುಹಿನ ಅರ್ಪಿತ ಮುಖವನರಿಯದೆ ಪರಮಾಮೃತಶೇಷಾನ್ನವ ಹಾದಿ ಬೀದಿ ಕಲ್ಲು ಮಣ್ಣು ಕಾಷ್ಠಗಳಿಗೆ ಅರ್ಪಿಸಿ, ಇತ್ತಲಾಗಿ ಶ್ರೀಗುರುವಿತ್ತಲಿಂಗಕೆ ತೋರಿ ಭುಂಜಿಸಿ, ನಾಚಿಕಿಲ್ಲದೆ ಶಿವಲಿಂಗಸಂಗಿಗಳೆಂದು ಬೊಗಳುವವರ ಕೈಬಾಯೆಂಜಲು. ಭಕ್ತಗಣಸಾಕ್ಷಿಯಿಂದ, ಕಂಭ ಕುಂಭಮಧ್ಯದೊಳ್ ಕಂಕಣವ ಕಟ್ಟಿದ ತನ್ನ ಸ್ತ್ರೀಯಲ್ಲದೆ, ಒಬ್ಬರು ಭೋಗಿಸಿದ ಉಚ್ಚಿಷ್ಟದ ಪರಸ್ತ್ರೀಯಳ ಅಯೋಗ್ಯ ಭವಿಜನಾತ್ಮರು ಭೋಗಿಸಿದಂತೆ, ಆ ಸ್ತ್ರೀಯಳ ಉಡಿಕೆ ಪಟ್ಟಿ ಸೊಸಿ ವೇಸಿ ದಾಸಿ ಮೊದಲಾದ ಮೆಚ್ಚಿನ ರಾಣಿಯರೆಂದು ಲಜ್ಜೆಗೆಟ್ಟು ಬಾಳುವೆಯಿಂದ ಮುಕ್ತಿಯೆಂಬ ಮುತ್ತೈದೆತನಕ್ಕೆ ಸಲ್ಲದ, ಬಾಲರಂಡೆ ಬಳಸಿದರಂಡೆ ಮುಂಡೆರಾಣಿ ಹೆಣ್ಣಿನ ಸಂಗವ ಮಾಡುವನ ಸರ್ವಾಂಗಬಾಹ್ಯಾಂತರವೆಲ್ಲವು ಉಚ್ಛಿಷ್ಟವೆಂದುದು ಗುರುವಚನ. ಈ ವರ್ಮವ ಕಂಡರಿದು, ಹೊಲಬುದಪ್ಪಿ, ಪರರ ಹೆಣ್ಣು ಹೊನ್ನು ಮಣ್ಣು ಹಣಗಳ ಅಪಹಾರನಾಗಿ, ಪ್ರಸಾದ ಪಾದೋದಕ ಸೇವ್ಯರೆಂದು ಭಕ್ತ ಮಹೇಶ ಪ್ರಸಾದಸ್ತವ ನುಡಿದುಕೊಂಡು, ಅಸಗ ನೀರಮಿಂದು ತನುಮನ ಮಡಿಯಾಗದ ಊರರುವೆ ಊರ ಸೀರೆಯನುಟ್ಟು ಅಂದಚೆಂದಗಳಿಂದ ಮಡಿವಾಳರೆಂದಂತೆ, ನಾಮಧಾರಕ ಗುರು ನಾಮಧಾರಕ ಶಿಷ್ಯಸಂಬಂಧದಾಚರಣೆಯ ಬೊಗಳುವಂಥದೆ ಚತುರ್ಥಸೂತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.