Index   ವಚನ - 54    Search  
 
ಕರ್ಮಜಡಜೀವ ಭವಿಶೈವ ಪಾಷಂಡಿಗಳು ವರ್ತಿಸುವಂಥ ರಜಸೂತಕನಿರಸನದ ವಚನಸೂತ್ರವೆಂತೆಂದೊಡೆ: ಶಿವಾಚಾರಸಂಪನ್ನರಲ್ಲಿ ಜನಿತರಾಗಿ, ಕ್ರಿಯಾಶಕ್ತಿಯರೆನಿಸಿ, ಪೂರ್ವಜಾತವ ಕಳೆದುಳಿದು, ಶ್ರೀಗುರುವಿನ ಕಾರುಣ್ಯದಿಂದ ಕರಸ್ಥಲಕ್ಕೆ ಮನಸ್ಥಲಕ್ಕೆ ಭಾವಸ್ಥಲಕ್ಕೆ ಪ್ರಸನ್ನೋಪದೇಶದಿಂದ ಪ್ರತ್ಯಕ್ಷವಾಗಿ, ನಿಜೇಷ್ಟಪ್ರಾಣಭಾವಲಿಂಗವ ಬಿಜಯಂಗೈಸಿ, ಸರ್ವಾಂಗವೆಲ್ಲವನು ಚಿದ್ಘನಲಿಂಗಸ್ಪರಿಶನದಿಂದಾಯತ ಸ್ವಾಯತ ಸನ್ನಿಹಿತ ಮಾಡಿ ಲಿಂಗಶರೀರರೆನಿಸಿದ ಬಳಿಕ ಕ್ರಿಯಾಲಿಂಗಾಂಗನೆಯರು ಕ್ಷೀರದ ಭಾಂಡವು ಅಗ್ನಿಜ್ವಾಲೆಯಿಂದ ಹೊರಸೂಸಿದೋಪಾದಿಯಲ್ಲಿ ರಜಸ್ಸಾದರೆ ಸಂಕಲ್ಪಕರ್ಮಕ್ರಿಯೆಗಳಿಂದ ಅಮಲಲಿಂಗಸಂಗಸಂಯೋಗದಿಂದ ನಿರ್ಮಲಕಾಯರಾಗಿ, ಭವಘೋರಸಂಸಾರಕ್ಕೆ ವಿದೂರರಾದ ಪರಮಪ್ರಸಾದಪ್ರಸನ್ನಕಾಯರಾದೆವೆಂದು, ನಿಜವೀರಶೈವ ಸದ್ಗುರುಪಾದೋದಕದಿಂದ ಪವಿತ್ರಮಾರ್ಗವನರಿಯದೆ ಅಪವಿತ್ರ ಅನಾಚಾರಿಗಳ ಸಂಗದಿಂದ ಭಂಗರಾಗಿ, ತಾ ಬಂಧ ಬಟ್ಟೆ, ತಾನಿರುವ ಮುಕ್ತಿಮಂದಿರ, ತಾ ಬಯಲಾದ ನಿಜನಿವಾಸಸ್ಥಾನವೆ ಲಿಂಗಸಂಗಮರಸವೆಂದರಿಯದೆ ಬರುಕಾಯರಾಗಿ, ಹೊಲೆಗಂಡಿಹೆನೆಂದು ನಿಜನಿವಾಸ ಕ್ರಿಯೆಯ ಬಿಟ್ಟು ತೊಲಗಲಾಗದು, ಹೊಲತಿಯಾದರೆ ಲಿಂಗಜಂಗಮಾರಾಧನೆಯ ಮಾಡಲಾಗದು. ಆ ಲಿಂಗಜಂಗಮವು ಆ ಹೊಲೆಪೂಜೋಪಚಾರ ಕ್ರಿಯಾರ್ಪಣಗಳ ಕೊಳ್ಳಲಾಗದು. ಅದೆಂತೆಂದೊಡೆ: ಪಾರ್ವತಿಗೆ ಬೋಧಿಸಿದ ಹರವಾಕ್ಯವು ಸಾಕ್ಷಿ: “ಲಿಂಗಾರ್ಚನಾರತಾ ನಾರೀ ಸೂತಕಾ ಚ ರಜಸ್ವಲಾ| ರವಿರಗ್ನಿರ್ಯಥಾವಾಯುಸ್ತಥಾ ಕೋಟಿಗುಣಃ ಶುಚಿ|| ಪೂಜಾಲೋಪೋ ನ ಕರ್ತವ್ಯಃ ಸೂತಕೇ ಮೃತಕೇಪಿ ವಾ| ಜಲಬುದ್ಬುಧವದ್ದೇಹಂ ತಸ್ಮಾತ್ ಲಿಂಗಂ ಸದಾರ್ಚಯೇತ್||” ಎಂದುದಾಗಿ, ಇದು ಕಾರಣ ಶ್ರೀ ಗುರುಕೃಪೆಯಿಂದೆ ತೆರಹುಗುಡದೆ ದಿವರಾತ್ರಿಗಳೆನ್ನದೆ ನಿಮಿಷಾರ್ಧವಗಲದೆ, ಸರ್ವಾಂಗವೆಲ್ಲ ಪ್ರಸನ್ನತೆ ಪ್ರಸಾದ ನಿಜೇಷ್ಟ ಲಿಂಗಸಂಬಂಧದಾಚರಣೆಯಿಂದ ಕೂಟಸ್ಥವಾದ ಕ್ರಿಯಾಂಗನೆಯರು, ರಜಸ್ಸಾದಾಕ್ಷಣವೆ, ಉಕ್ಕೇರಿದ ಭಾಂಡವ ಹೆಗಲತೊಳದೋಪಾದಿಯಲ್ಲಿ ದೀಕ್ಷಾಪಾದೋದಕದಿಂದ ಸ್ನಾನಂಗೈದು, ಲಿಂಗಸಂಗಸುಖಿಗಳಾಗಿ, ಶ್ರೀಗುರುಕಾರುಣ್ಯದಿಂದ ಲಿಂಗಾಂಗಸಂಗವುಳ್ಳ ಸಂಬಂಧ ವರದರುಶನ ಸ್ಪರಿಶನ ಸಂಭಾಷಣೆಗಳಿಂದ ಸತ್ಯಶುದ್ಧ ನಡೆ ನುಡಿಯುಳ್ಳವರಾಗಿರ್ಪುದೆ ಪ್ರಮಥಗಣಮಾರ್ಗವು. ಇಂತು, ಹರಗಣ ನಡಾವಳಿಯನಳಿದುಳಿದ ಜಡಶೈವಾಯತ ವಾದಿಗಳಂತೆ ಗುರುವಿತ್ತ ಲಿಂಗವರಿಯದೆ,ಲಿಂಗಾವರಿಯದೆ ಲಿಂಗಾಚಾರ ನಡೆನುಡಿಗಳನರಿಯದೆ, ಗುರುಹಿರಿಯರ ಮಾನಮನ್ನಣೆಯಿಲ್ಲದೆ, ಊರ ಮಾರಿಯಂತೆ ಮನಬಂದಲ್ಲಿ ಚರಿಸಿ, ಸೂತಕ-ಪಾತಕಗಳಿಂದ ಹೊಲೆಕರ್ಮವ ಬಳಸುವ ದಿಂಡೆ ರಂಡೆಯರ ಸತಿ-ಸುತೆ-ಮಾತೆಯೊಡಹುಟ್ಟಿದವಳೆಂದು ಒಡಗೂಡಿ ಸಮರತಿಕ್ರಿಯೆಗಳ ಬಳಸಿ, ನಾಚಿಕೆಯಿಲ್ಲದೆ ವೀರಶೈವಾಚಾರ ಭಕ್ತಮಹೇಶ್ವರರೆಂದು ನಡೆಗೆಟ್ಟು, ಷಟುಸ್ಥಲಾನುಭಾವವ ಬಳಸಿ, ಕುಂದುನುಡಿಯ ನುಡಿವುದೇ ತೃತೀಯ ಸೂತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.