Index   ವಚನ - 64    Search  
 
ಪೂರ್ವವನಳಿದುಳಿದು ಪುನರ್ಜಾತರಾದ ಕಿನ್ನರಯ್ಯ ಮೊದಲಾದ ಮುನ್ನೂರರವತ್ತು ಗಣಸಮೂಹದ ಕಿಂಕುರ್ವಾಣಭಕ್ತಿಬಿನ್ನಹಕ್ಕೆ ಕಲಕೇತ ಕಲಿಗಣರು ಮೊದಲಾದ ನಾನೂರಹತ್ತು ಗಣಾರಾಧ್ಯರು ಕಂಪನವೇರಿ, ಹದುಳಿಗರಾಗಿ, ಹರಹರಾ ನಮೋ ನಮೋಯೆಂದು ಹಸ್ತಾಂಜಳಿತದೊಳ್ ನಿಂದು, ನಮ್ಮ ಮೇಲೆ ಬಹುಭಾರವ ಹೊರಿಸುವರೆ, ನೀವು ಕೊಟ್ಟ ಮಹದರುವಿನಾಚಾರ ನೀವು ಕೊಟ್ಟ ನಿಜವೀರಶೈವ ಭಕ್ತಿಜ್ಞಾನವೈರಾಗ್ಯದಾಚರಣೆ ನೀವು ಕೃಪೆಮಾಡಿದ ಪರಿಪೂರ್ಣ ಪ್ರಸನ್ನ ಹರುಷದ ನಿಧಿನಿಧಾನ ಸಂಬಂಧಸುಧಾರಸ ಶರಣು ಶರಣಾರ್ಥಿ, ನಮ್ಮ ಗೃಹವ ಪ್ರಸನ್ನಪ್ರಸಾದಮೂರ್ತಿ ಶ್ರೀಗುರುಲಿಂಗಜಂಗಮ ಒಡಗೂಡಿ ದಯಾಂತಃಕರಣವಿಟ್ಟು ಕೃಪೆಮಾಡಿ, ನಿಮ್ಮ ಮೋಹದ ಕಂದಗಳೆಂದು ತಪ್ಪ ನೋಡದೆ ಒಪ್ಪವಿಟ್ಟು ಪರಿಪೂಜ್ಯರ ಮಾಡಿ ಆರೈವುದೆ ನಿಮ್ಮ ಧರ್ಮವಯ್ಯಾ. ನಾವು ಅನಂತ ನಡೆನುಡಿ ದೃಢನೈಷ್ಠೆ ತಪ್ಪಿದ ತಪ್ಪುಕರು, ನಮ್ಮಲ್ಲಿ ಗುಣವ ನೋಡುವರೆ ಅಣುಮಾತ್ರ ಹುರುಳಿಲ್ಲದಜ್ಞಾನಿಗಳು ನೀವು ನಾವು ಒಂದೊಡಲಾಗಿ, ಪರಿಪೂರ್ಣ ನಡೆನುಡಿ ಚೈತನ್ಯವ ಸಾಧಿಸಬೇಕಲ್ಲದೆ, ನಾವೇನು ಪೂರ್ಣಜ್ಞಾನಿಗಳೆ ನಿಮ್ಮ ವಿಜ್ಞಾಪಿಸುವುದಕ್ಕೆ? ಎಂದು ತಮ್ಮ ಗೃಹಂಗಳಿಗೆ ಬಿನ್ನೈಸಿ, ಮುನ್ನೂರರವತ್ತು ಸಮ್ಮೇಳ ಮೊದಲಾದವರು ನಾನೂರಹತ್ತು ಗಣಾರಾಧ್ಯರು ಸಹವಾಗಿ ಏಳನೂರೆಪ್ಪತ್ತು ಅಮರಗಣಂಗಳಲ್ಲಿ ಚಿಕ್ಕದಂಡನಾಥನ ಸಮಯಾಚಾರ ಅಚ್ಚಪ್ರಸಾದಿಜಂಗಮ ಮೂರುಸಾವಿರ, ನಿಚ್ಚಪ್ರಸಾದಿಜಂಗಮ ಮೂರುಸಾವಿರ, ಸಮಯಪ್ರಸಾದಿಜಂಗಮ ಮೂರುಸಾವಿರ ಕೂಡಿ ಗಣಿತವ ಮಾಡಲಾಗಿ, ಹನ್ನೆರಡುಸಾವಿರ ಪರಿಪೂರ್ಣಪ್ರಸಾದ ಜಂಗಮ ಮುಂತಾದ ದಂಡನಾಥನ ಅರ್ಪಿತಾವಧಾನದ ಸಮಯಾಚಾರದಲ್ಲಿ ಪಾದತೀರ್ಥವ ಲಿಂಗಕ್ಕರ್ಪಿಸಿ, ಲಿಂಗತೀರ್ಥವ ಸ್ವೀಕರಿಸಿ, ಹಸ್ತಸ್ಪರ್ಶನವಾದ ಶುದ್ಧಪ್ರಸಾದವ ಸ್ವೀಕರಿಸಿ, ಲಿಂಗದಿಂದುಳುಮೆಯಾದ ಸಿದ್ಧಪ್ರಸಾದವ ಸ್ವೀಕರಿಸಿ, ಪಾದೋದಕ ಭಸ್ಮೋದಕ ಮಂತ್ರೋದಕಸಂಬಂಧವಾದ ಪರಮಾನಂದಜಲದಿಂದ ಕಂಡಿತವೆನಿಸಿ, ಪ್ರಸಿದ್ಧಪ್ರಸಾದಿಗಳಿಗೆ ಕಿಂಕುರ್ವಾಣಭಕ್ತಿಭೃತ್ಯತ್ವದಿಂದ ಆಚಾರಕ್ರಿಯಾಜ್ಞಾನಗಳ ಬೆಸಗೊಂಡು ಪಟ್ಸ್ಥಲಮಾರ್ಗಸಾಧನೆಗಳಿಂದ ಪರಿಶೋಭಿಸುವ ಶುದ್ಧಸಿದ್ಧಪ್ರಸಿದ್ಧಪ್ರಸಾದಿ ಜಂಗಮವು ಇಪ್ಪತ್ತುನಾಲ್ಕುಸಾವಿರ ಕೂಡಿ, ಗಣಿತವ ಮಾಡಲಾಗಿ, ಮೂವತ್ತಾರುಸಾವಿರ ಜಂಗಮವೆ ದಂಡನಾಥನರ್ಧಾಂಗಿ ಚಿತ್ಪ್ರಭಾಪುಂಜರಂಜಿತೆ, ಮಹಾರಾಜಾಧಿರಾಜನಾಯಕಿ ನೀಲಲೋಚನೆಯರ ಕರ ಮನ ಭಾವದ ಕೊನೆಮೊನೆಯಲ್ಲಿ ಬೆಳಗುತಿಪ್ಪರು. ಇಂತೆಸೆವ ಮೂವತ್ತಾರುಸಾವಿರ ಜಂಗಮವು ಏಳನೂರೆಪ್ಪತ್ತಮರಗಣಂಗಳೆಲ್ಲ ಒಂದೊಡಲಾಗಿ ಮಾರ್ಗಾಚಾರ ಕ್ರಿಯಾಕಾಯಾರ್ಪಣದ್ರವ್ಯಗಳ ಲವಣಮಿಶ್ರಂಗಳೊಳ್ ಪಾಕಂಗೈದು, ಸಾವಧಾನದಿರವನರಿದಂಗವಾಗಿ, ಲಿಂಗವೆ ತಾನುತಾನಾಗಿರ್ಪ ಆಚಾರವರಿದು, ಮಿಂದಾಚಾರ ಕ್ರಿಯಾಕರಣಾರ್ಪಣದ್ರವ್ಯಗಳ ಸಾವಧಾನದಿರವನರಿದು, ಪ್ರಾಣವಾಗಿ, ಪ್ರಾಣಲಿಂಗಾರ್ಪಣವ ಮಾಡಿ, ಪ್ರಾಣಲಿಂಗಮೂರ್ತಿ ತಾನಾಗಿರ್ಪುದೆ ಆಚಾರದಿರವು; ಪರಿಪೂರ್ಣಾಚಾರಕ್ರಿಯೆ. ಭಾವಾರ್ಪಣದ್ರವ್ಯಗಳ ಸಾವಧಾನದಿರವರಿದು ಪೂರ್ಣಾನುಭಾವಮಾಗಿ, ಭಾವಲಿಂಗಾರ್ಪಣವ ಮಾಡಿ, ಭಾವಲಿಂಗಮೂರ್ತಿ ತಾನಾಗಿರ್ಪುದೆ ಆಚಾರದಿರವು ಈ ಆಚಾರಮಾರ್ಗ ಹೊದ್ದದಂತೆ ಘನಮಹದರುವಿನ ಪ್ರಸನ್ನಪ್ರಸಾದ ಭಕ್ತಿಪಾವುಡವೆಂದು ಕೊಟ್ಟು ಕೊಂಬ ಭಕ್ತಂಗೆ ಮಾಡಿ ನೀಡುವ ಕಾಯಕ, ಮಹೇಶಂಗೆ ಬೇಡಿ ನೀಡುವ ಕಾಯಕ, ಇವರಿಬ್ಬರಿಗೆ ಚೈತನ್ಯವಾಗಿ ಸ್ವಯಜಂಗಮ ಚರಜಂಗಮ ಪರಜಂಗಮವೆನಿಸಿ, ನಿಜವಿರಕ್ತಿಯಂ ತಳೆದೊಪ್ಪಿ ಆಚಾರದರುವ ಎಚ್ಚರವೆಚ್ಚರವೆಂದು ಇಚ್ಛೆಯ ನುಡಿದು, ಮಲತ್ರಯವೆಂಬ ಬಚ್ಚಲೋಕುಳಿಯಲ್ಲಿ ಬೀಳದೆ ಪವಿತ್ರವ ಕೊಟ್ಟು, ಪವಿತ್ರವ ಕೊಂಡು, ಭಕ್ತ ಮಹೇಶ್ವರರಿಂಗೆ ತತ್ಪ್ರಾಣವಾಗಿರ್ಪುದೆ ಜಂಗಮದಕಾಯಕ. ಇಂತೀ ಕಾಯಕವೆ ಕೈವಲ್ಯವೆಂದು ನಂಬಿ ನಚ್ಚಿ ಮಚ್ಚಿ, ತಮ್ಮ ತಾವರಿದು, ದೇಹಾದಿ ಭೋಗಭುಕ್ತಯೋಗಸಾಧನೆ ಫಲಪದಮೋಕ್ಷಾಪೇಕ್ಷೆಗಳ ಮರೆದಿಪ್ಪವರೆ ಕಾರಣಿಕರು ಕಾಣಾ, ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.