Index   ವಚನ - 63    Search  
 
ಆ ಕಲಕೇತಯ್ಯಗಳು ಗುಪ್ತಪಾತಕಸೂತಕದ ಅನಾಚಾರದಭ್ರಜಯಾಮಾರುತನಾಗಿ ಖಂಡ್ರಿಸಿ ನುಡಿದ ನಿರೂಪಣವೆಂಬ ಮೋಡವನೋಡಿಸಿ ಪವಿತ್ರರೆನಿಸುವ ನಿಮಿತ್ಯಾರ್ಥ ಮೊದಲಾದ ಅರೆಭಕ್ತರೆಲ್ಲ ಒಂದೊಡಲಾಗಿ ಶರಣುಹೊಕ್ಕು, ಹಸ್ತಾಂಜಲಿತದೊಳ್ ನಿಂದು, ದೃಢಭಕ್ತಿಯಿಂದ ಹದುಳಿಗರಾಗಿ, ಮೃದುತರ ಕಿಂಕರನುಡಿಗಳಿಂದ ನುಡಿದ ಪ್ರತ್ಯುತ್ತರ: ಹರಹರ ಹಿಂದೆ ತಪ್ಪಿ ನಿಮ್ಮ ಘನಾಚಾರ ಸನ್ಮಾರ್ಗವ ಬಿಟ್ಟು, ಪರಮಪಾತಕ ಸೂತಕವಾಚರಿಸಿದಕ್ಕೆ ಎಡವಿಬಿದ್ದು, ಪ್ರಮಥಗಣಾಜ್ಞೆಗಳೊಳಗಾಗಿ, ಭವಸಮುದ್ರವ ದಾಂಟಿ, ಇನ್ನು ತಪ್ಪಿದರೆ ನಮ್ಮ ಪ್ರಮಾಣವೆ ನಮಗೆ ಮೃತ್ಯುವಾಗಿ, ಸದ್ಧರ್ಮವ ಸೇರದಂತೆ ಸಾಕ್ಷಿಯಾಗಿರುವರು. ಅವರಾರೆಂದೊಡೆ: ಭಕ್ತಿಸ್ಥಲಕ್ಕೆ ಕಾರಣಿಕರು ಹಿರಿದಂಡನಾಥ, ಮಹೇಶ್ವರಸ್ಥಲಕ್ಕೆ ಕಾರಣಿಕರು ವೀರಗಂಟೆ, ಪ್ರಸಾದಿಸ್ಥಲಕ್ಕೆ ಕಾರಣಿಕರು ಮರುಳಶಂಕರತಂದೆಗಳು, ಪ್ರಾಣಲಿಂಗಿಸ್ಥಲಕ್ಕೆ ಕಾರಣಿಕರು ಮುಗ್ಧಸಂಗಪ್ಪನವರು ಶರಣಸ್ಥಲಕ್ಕೆ ಕಾರಣಿಕರು ಚಿಕ್ಕದಂಡನಾಥ, ಐಕ್ಯಸ್ಥಲಕ್ಕೆ ಕಾರಣಿಕರು ಅಜಗಣ್ಣತಂದೆಗಳು, ನಿರವಯಸ್ಥಲಕ್ಕೆ ಕಾರಣಿಕರು ಗುಹೇಶ್ವರ ಅಲ್ಲಮಪ್ರಭುಸಾಕ್ಷಿಯಾಗಿ, ನಿಮ್ಮ ಸರ್ವಾಚಾರಸಂಪದಸ್ಥಲಕ್ಕೆ ಸಲ್ಲದಂತೆ ಭವಜೀವಿಗಳಾಗಿ ಹೋಗುವುದಕ್ಕೆ ನಮ್ಮ ಮೂಲ ಚಿತ್ತುವಿನಲ್ಲುದಯವಾದ ಚಿದ್ಭ್ರಹ್ಮಮೂರ್ತಿ ಪರಶಿವಲಿಂಗಮಂತ್ರದಿರವು ತೊಲಗುವುದೆ ಪ್ರಮಾಣು. ಇದಕ್ಕೆ ಸಂದುಸಂಶಯವಿಲ್ಲವು. ಅದೇನುಕಾರಣವೆಂದೊಡೆ: ಹಿಂದೆ ಮಾಡಿದಂಥ ಪ್ರಮಥಗಣ ಬಿನ್ನಪದ ಕಕ್ಕಯ್ಯಗಳ ನಿಜಮೋಕ್ಷದ ಪರಮಾಮೃತಪ್ರಸಾದ ಜೇಡರ ದಾಸಯ್ಯಗಳ ಮಹದರುವಿನ ಆಚಾರಪರಿಧಿಯಾದ ಪಾವುಡದ ಸಾಕ್ಷಿ. ಶಿವಲೆಂಕಮಂಚಣ್ಣಗಳ ಜಪಮಾಲೆಯನೊಳಕೊಂಡರಿವಿನ ಶಿವದಾರ ಘಟ್ಟಿವಾಳಪ್ಪನ ಚಿತ್ಪ್ರಭಾಪುಂಜರಂಜಿತಮಾದ ಶ್ರೀಮದ್ಘನಭಸಿತವೆ ಸಾಕ್ಷಿ ಕಾಣಾ ತಂದೆಗಳಿರಾಯೆಂದು ಶರಣುಹೊಕ್ಕು, ಶ್ರೀಗುರುಲಿಂಗಜಂಗಮಗಣಾರಾಧ್ಯರಿಗೆ ಪರಮಾನಂದಪ್ರಸಾದ ಸ್ಥಲಕುಳದನುವರಿದು ಶರಣಸಂದೋಹದಿಂದ ಎಮ್ಮ ಕಾಯಾರ್ಪಣ ಕರಣಾರ್ಪಣ ಭಾವಾರ್ಪಣ ಪರಿಣಾಮಾರ್ಪಣ ಪರಿಪೂರ್ಣಾರ್ಪಣವೆಂಬ ಅಭಿವೃದ್ಧಿಗೆ ಕಾರಣವೆಂಬ ನೀವೇ ಗತಿ, ನೀವೇ ಮತಿ, ನೀವೇ ಹಿತ, ನೀವೇ ಪಿತ, ನೀವೇ ಮಾತೆ, ನೀವೆಮಗೆ ಸರ್ವಚೈತನ್ಯವಯ್ಯಾ, ನೀವೆಮಗೆ ಅಭಿಮಾನವೆಂಬ ದಯಾಂತಃಕರಣವಿಟ್ಟು ಭವಾರಣ್ಯವೆಂಬ ಪರಿಭವಬಾಧೆಗೆ ಹಿಂದಕ್ಕೆ ತಿರುಗದಂತೆ ಕೃಪೆಮಾಡಿ ನಿಮ್ಮಿಷ್ಟಲಿಂಗದ ಕಳೆ ಕ್ರಿಯಾಚಾರ ಶುದ್ಧಪ್ರಸಾದ ನಡೆಪರುಷ, ನಿಮ್ಮ ಪ್ರಾಣಲಿಂಗದ ಕಳೆ ಜ್ಞಾನಾಚಾರ ಸಿದ್ಧಪ್ರಸಾದ ನುಡಿಪರುಷ, ನಿಮ್ಮ ಭಾವಲಿಂಗದಕಳೆ ಭಾವಾಚಾರ ಪ್ರಸಿದ್ಧಪ್ರಸಾದ ನೋಟಪರುಷ ನಿಮ್ಮಣುಲಿಂಗದಕಳೆ ಧರ್ಮಾಚಾರ ಪ್ರಸನ್ನಪ್ರಸಾದ ಹಸ್ತಪರುಷ, ನಿಮ್ಮ ಪರಮಾಣುಲಿಂಗದಕಳೆ ಸರ್ವಾಚಾರ ಚಿತ್ಪ್ರಭಾಪ್ರಸಾದ ಭಾವಪರುಷ, ನಿಮ್ಮ ಚಿದ್ಘನಮಹಾನಿರವಯಲಿಂಗದ ಕಳೆ ಪರಿಪೂರ್ಣಾಚಾರ ಪರಿಪೂರ್ಣಪ್ರಸಾದದ ಸರ್ವಾಂಗಪರುಷವಿತ್ತು ಪರಮಪವಿತ್ರಪ್ರಸಾದವೆನಿಸಿ, ನೀವರ್ಪಿಸಿದ ನಿಜಶೇಷಪ್ರಸಾದವ ಮಾಡಿ ನಿತ್ಯಮುಕ್ತರೆನಿಸಿರಯ್ಯಾ ಪ್ರಮಥಗಣವೆ ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮವೆಂದು, ಪರಿಪೂರ್ಣಭಕ್ತಿಯಿಂದ ಕಿನ್ನರಯ್ಯಗಳೆ ಮೊದಲು ಇಳೆಹಾಳ ಬ್ರಹ್ಮಯ್ಯಗಳು ಕಡೆಯಾದ ಮುನ್ನೂರರವತ್ತು ಕಡೆಯಾದ ಮುನ್ನೂರರವತ್ತು ಗಣಾರಾಧ್ಯರು, ಕಲಕೇತ ಮೊದಲಾದ ನಿಜವೀರಶೈವ ಸದ್ಧರ್ಮಿಗಳಿಗೆ ಅಭಿವಂದಿಸಿ ಘನಮನಸಾಕ್ಷಿಯಾಗಿ ಹಸ್ತಾಂಜಲಿತದೊಳ್ ನಿಂದಿರ್ಪರು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.